1.90 ಕೋಟಿ ಬಾಕಿ ಪಾವತಿಸದ PWD ಕಚೇರಿಗೆ ಕೋರ್ಟ್ ಅಟ್ಯಾಚ್ಮೆಂಟ್; ಕಚೇರಿ ಖಾಲಿ ಮಾಡಿದ ಸಿಬ್ಬಂದಿ!

ಯಾದಗಿರಿ: ಗುತ್ತಿಗೆದಾರರೊಬ್ಬರಿಗೆ ಪಾವತಿಸಬೇಕಿದ್ದ ಸುಮಾರು ₹1.90 ಕೋಟಿ ಮೊತ್ತದ ಬಾಕಿ ಹಣವನ್ನು ನೀಡದ ಹಿನ್ನೆಲೆಯಲ್ಲಿ, ನ್ಯಾಯಾಲಯದ ಆದೇಶದ ಮೇರೆಗೆ ಯಾದಗಿರಿಯ ಲೋಕೋಪಯೋಗಿ ಇಲಾಖೆ (PWD) ಕಚೇರಿಯನ್ನು ಕೋರ್ಟ್ ಅಟ್ಯಾಚ್ಮೆಂಟ್ (ಜಪ್ತಿ) ಮಾಡಿರುವ ಘಟನೆ ನಡೆದಿದೆ.
ಕೋರ್ಟ್ ಅಟ್ಯಾಚ್ಮೆಂಟ್ ಜಾರಿಯಾದ ಬೆನ್ನಲ್ಲೇ PWD ಕಚೇರಿಯಲ್ಲಿದ್ದ ಮೇಜು, ಖುರ್ಚಿ ಹಾಗೂ ಕಂಪ್ಯೂಟರ್ ಸೇರಿದಂತೆ ಪ್ರಮುಖ ಕಚೇರಿ ಸಾಮಗ್ರಿಗಳನ್ನು ಸಿಬ್ಬಂದಿಗಳು ಹೊರಗೆ ಸ್ಥಳಾಂತರಿಸಿ ಕಚೇರಿ ಖಾಲಿ ಮಾಡುತ್ತಿರುವ ದೃಶ್ಯಗಳು ಕಂಡುಬಂದಿವೆ.
ಪ್ರಕರಣದ ಹಿನ್ನೆಲೆ:
ಲೋಕೋಪಯೋಗಿ ಇಲಾಖೆಯಡಿ ಕೈಗೊಂಡಿದ್ದ ಗುತ್ತಿಗೆ ಕಾಮಗಾರಿಯ ಬಿಲ್ ಹಣ ದೀರ್ಘಕಾಲದಿಂದ ಪಾವತಿಯಾಗಿರಲಿಲ್ಲ. ಇದರಿಂದ ಕಂಗೆಟ್ಟಿದ್ದ ಗುತ್ತಿಗೆದಾರರು ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಬಾಕಿ ಮೊತ್ತ ಪಾವತಿಸದ ಕಾರಣಕ್ಕೆ ಇಲಾಖೆಯ ಕಚೇರಿಯನ್ನೇ ಅಟ್ಯಾಚ್ಮೆಂಟ್ ಮಾಡಲು ಆದೇಶಿಸಿದೆ ಎನ್ನಲಾಗಿದೆ.
ಸಾರ್ವಜನಿಕ ವಲಯದಲ್ಲಿ ಚರ್ಚೆ:
ಸರ್ಕಾರಿ ಕಚೇರಿಯೊಂದಕ್ಕೆ ನ್ಯಾಯಾಲಯದ ಆದೇಶದಂತೆ ಅಟ್ಯಾಚ್ಮೆಂಟ್ ಆಗಿ ಕಚೇರಿಯನ್ನೇ ಖಾಲಿ ಮಾಡುವಂತಾಗಿರುವುದು ಯಾದಗಿರಿ ಜಿಲ್ಲೆಯ ಸಾರ್ವಜನಿಕ ಹಾಗೂ ಆಡಳಿತಾತ್ಮಕ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ.
₹1.90 ಕೋಟಿಯಷ್ಟು ಬೃಹತ್ ಮೊತ್ತ ಬಾಕಿ ಉಳಿಸಿಕೊಳ್ಳಲು ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೇ? ಮತ್ತು ಈ ಬಗ್ಗೆ ಸರ್ಕಾರ ಮುಂದೆ ಯಾವ ಕ್ರಮ ಕೈಗೊಳ್ಳಲಿದೆ ಎಂಬ ಪ್ರಶ್ನೆಗಳು ಎದ್ದಿದ್ದು, ಘಟನೆಯ ಸಂಪೂರ್ಣ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.



