ಮನೆ ಮಾಲೀಕರ ಮುಂದೆಯೇ ಕಳ್ಳತನ ಮಾಡಿ ಪರಾರಿಯಾಗಿದ್ದ ಖತರ್ನಾಕ್ ಕಳ್ಳ ಬಂಧನ: ₹12 ಲಕ್ಷ ಮೌಲ್ಯದ ಚಿನ್ನಾಭರಣ, 7 ಬೈಕ್ ಜಪ್ತಿ

ದೇವನಹಳ್ಳಿ: ಮನೆ ಮಾಲೀಕರ ಕಣ್ಣೆದುರೇ ಕಳ್ಳತನ ನಡೆಸಿ ಪರಾರಿಯಾಗಿದ್ದ ಖತರ್ನಾಕ್ ಕಳ್ಳನನ್ನು ದೇವನಹಳ್ಳಿ ತಾಲೂಕಿನ ವಿಜಯಪುರ ಠಾಣೆ ಪೊಲೀಸರು ಕೇವಲ 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕು ಮೂಲದ ವಿಜಯಕುಮಾರ್ (24) ಬಂಧಿತ ಆರೋಪಿ. ಈತ ಎರಡು ಪ್ರತ್ಯೇಕ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ಚೋರಕೈ ತೋರಿಸಿ ತಲೆಮರೆಸಿಕೊಂಡಿದ್ದನು.
₹12 ಲಕ್ಷ ಮೌಲ್ಯದ ಮುಟ್ಟುಗೋಲು:
ಬಂಧಿತ ಆರೋಪಿಯಿಂದ ಸುಮಾರು ₹12 ಲಕ್ಷ ಮೌಲ್ಯದ 65 ಗ್ರಾಂ ಚಿನ್ನದ ಚೈನ್, 3 ಜೊತೆ ಕಿವಿ ಓಲೆ, ಉಂಗುರ ಸೇರಿದಂತೆ ಒಟ್ಟು ಚಿನ್ನಾಭರಣ ಹಾಗೂ ಕ ಕೃತ್ಯಕ್ಕೆ ಬಳಸಿದ್ದ ಮತ್ತು ಕಳವು ಮಾಡಿದ್ದ 7 ದ್ವಿಚಕ್ರ ವಾಹನಗಳನ್ನು (ಬೈಕ್) ಪೊಲೀಸರು ಜಪ್ತಿ ಮಾಡಿದ್ದಾರೆ.
ಕಾರ್ಯಾಚರಣೆಯ ವಿವರ:
ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಮಾಲೀಕರ ಎದುರಲ್ಲೇ ಧೈರ್ಯವಾಗಿ ಕಳ್ಳತನ ನಡೆಸಿ ಎಸ್ಕೇಪ್ ಆಗಿದ್ದ ಆರೋಪಿಯ ಸುಳಿವು ಬೆನ್ನತ್ತಿದ ಪೊಲೀಸರು, ಕೃತ್ಯ ನಡೆದ 24 ಗಂಟೆಯೊಳಗೆ ಆತನನ್ನು ಲಾಕ್ ಮಾಡಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿಜಯಪುರ ಪೊಲೀಸ್ ಇನ್ಸ್ಪೆಕ್ಟರ್ ಲಕ್ಷ್ಮೀನಾರಾಯಣ ಅವರ ನೇತೃತ್ವದ ತಂಡ ಈ ಭರ್ಜರಿ ಕಾರ್ಯಾಚರಣೆ ನಡೆಸಿದೆ.
ಪ್ರಕರಣ ದಾಖಲು:
ಬಂಧಿತ ಆರೋಪಿಯ ವಿರುದ್ಧ ಹೊಸ ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯ ಕಲಂ 303(2), 331(3) ಹಾಗೂ 305(ಎ) ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ವಿಜಯಪುರ ಠಾಣೆ ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.



