ಕರ್ನಾಟಕ ಪ್ರೆಸ್ ಕ್ಲಬ್ ಬೆಂಗಳೂರು ನಗರ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಕೆ.ಆರ್. ಹರೀಶ್ ಬಾಬು ಆಯ್ಕೆ

ಬೆಂಗಳೂರು: ಕರ್ನಾಟಕ ಪ್ರೆಸ್ ಕ್ಲಬ್ (ರಿ) ಸಂಸ್ಥೆಯ ಬೆಂಗಳೂರು ನಗರ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಹಿರಿಯ ಪತ್ರಕರ್ತ ಹಾಗೂ ‘ಪೊಲೀಸ್ ವಾರ್ತೆ’ ಪತ್ರಿಕೆಯ ಗೌರವ ಸಂಪಾದಕ ಕೆ.ಆರ್. ಹರೀಶ್ ಬಾಬು ಅವರು ನೇಮಕಗೊಂಡಿದ್ದಾರೆ.
ಕರ್ನಾಟಕ ಪ್ರೆಸ್ ಕ್ಲಬ್‌ನ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ರಮೇಶ್ ಶೆಟ್ಟಿ ಅವರ ಶಿಫಾರಸಿನ ಮೇರೆಗೆ, ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್ ಎಸ್.ಜಿ. ಅವರು ಈ ನೇಮಕಾತಿ ಆದೇಶವನ್ನು ಅಧಿಕೃತವಾಗಿ ಹೊರಡಿಸಿದ್ದಾರೆ. ಪತ್ರಿಕಾ ವೃತ್ತಿಯ ಮೂಲ ಮೌಲ್ಯಗಳಾದ ಸತ್ಯ, ನ್ಯಾಯ, ನೈತಿಕತೆ ಹಾಗೂ ಪತ್ರಿಕಾ ಧರ್ಮವನ್ನು ಎತ್ತಿಹಿಡಿದು ಹೊಸ ಜವಾಬ್ದಾರಿಯನ್ನು ನಿರ್ವಹಿಸುವಂತೆ ಆದೇಶದಲ್ಲಿ ನಿರ್ದೇಶಿಸಲಾಗಿದೆ.
ಪತ್ರಕರ್ತರ ಹಿತಾಸಕ್ತಿಗೆ ಆದ್ಯತೆ:
ಬೆಂಗಳೂರು ನಗರ ಜಿಲ್ಲೆಯಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು, ಪತ್ರಕರ್ತರನ್ನು ಒಗ್ಗೂಡಿಸುವುದು ಹಾಗೂ ವೃತ್ತಿನಿರತ ಪತ್ರಕರ್ತರು ಎದುರಿಸುವ ಕಷ್ಟ-ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಸೂಕ್ತ ನೆರವು ನೀಡುವುದು ನೂತನ ಸಂಘಟನಾ ಕಾರ್ಯದರ್ಶಿಯ ಪ್ರಮುಖ ಆದ್ಯತೆಯಾಗಲಿದೆ. ಇದರೊಂದಿಗೆ ಪತ್ರಕರ್ತರ ಹಕ್ಕುಗಳು ಹಾಗೂ ವೃತ್ತಿಪರ ಹಿತಾಸಕ್ತಿಗಳ ಪರವಾಗಿ ಧ್ವನಿ ಎತ್ತುವ ಜವಾಬ್ದಾರಿಯನ್ನೂ ವಹಿಸಲಾಗಿದೆ.
ಸಾಮಾಜಿಕ ಕಳಕಳಿ:
ಕೇವಲ ಪತ್ರಿಕಾರಂಗದ ಹಿತಾಸಕ್ತಿಯಷ್ಟೇ ಅಲ್ಲದೆ, ಸಮಾಜದ ಬಡವರು ಹಾಗೂ ದುರ್ಬಲ ವರ್ಗದ ಜನರ ಸಮಸ್ಯೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದು, ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಮುನ್ನೆಲೆಗೆ ತರುವುದು ಮತ್ತು ಭ್ರಷ್ಟಾಚಾರ ಹಾಗೂ ಅಕ್ರಮಗಳ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿಯೂ ಶ್ರಮಿಸುವಂತೆ ಸಂಘಟನೆ ಸೂಚಿಸಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್‌ನ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ‘ಪೊಲೀಸ್ ವಾರ್ತೆ’ ಸಂಪಾದಕ ಸುಭಾಷ್ ಆರ್. ಶೆಟ್ಟಿ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ರಮೇಶ್ ಶೆಟ್ಟಿ, ಕರಾವಳಿ ಕರ್ನಾಟಕ ಅಧ್ಯಕ್ಷ ಕುಮಾರ್ ನಾಯ್ಕ್ ಹಾಗೂ ‘ಪೊಲೀಸ್ ವಾರ್ತೆ’ಯ ಶ್ರೀನಿವಾಸ್ ಉಪಸ್ಥಿತರಿದ್ದರು.




