ಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜಕೀಯರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

“ರೈತರ ಸಂಕಷ್ಟದ ಜ್ಞಾನೋದಯ ಸರಕಾರಕ್ಕಿಲ್ಲ”: ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿ

Share News

ಮಸ್ಕಿ (ರಾಯಚೂರು): “ಬಿ. ನಾಗೇಂದ್ರ ಅವರೇನೋ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರಬಹುದು. ಆದರೆ, ಲೂಟಿ ಮಾಡಿದ ಹಣ ವಾಲ್ಮೀಕಿ ನಿಗಮದ ಖಾತೆಗೆ ವಾಪಸ್ ಬಂದಿಲ್ಲ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

​ಬರ ಪರಿಹಾರ ನೀಡುವಲ್ಲಿ ಸರಕಾರ ವಿಫಲ

ಪಾದಯಾತ್ರೆ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, “ರಾಜ್ಯದ ರೈತರು ಇವತ್ತು ಭೀಕರ ಬರಗಾಲ ಎದುರಿಸುತ್ತಿದ್ದಾರೆ. 200ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ತೀವ್ರ ಬರಪೀಡಿತ ಪರಿಸ್ಥಿತಿ ಇದ್ದರೂ, ಮುಖ್ಯಮಂತ್ರಿಗಳು ಕೇವಲ 101 ತಾಲ್ಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಹಾಗೂ ಸಚಿವ ಸಂಪುಟಕ್ಕೆ ರೈತರ ನೈಜ ಸಂಕಷ್ಟದ ವಾಸ್ತವಿಕ ಜ್ಞಾನೋದಯವೇ ಇದ್ದಂತಿಲ್ಲ” ಎಂದು ಟೀಕಿಸಿದರು.

​”ಲಿಂಗಸುಗೂರು, ರಾಯಚೂರು ಸೇರಿದಂತೆ ಉತ್ತರ ಕರ್ನಾಟಕದ ಭಾಗಗಳಲ್ಲಿ ಸಾವಿರ ಅಡಿ ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಸರ್ಕಾರ ಇದುವರೆಗೆ ಸೂಕ್ತ ಬರ ಪರಿಹಾರವನ್ನೂ ನೀಡಿಲ್ಲ. ಮಾತೆತ್ತಿದರೆ ಕೇಂದ್ರ ಸರ್ಕಾರದತ್ತ ಬೆರಳು ತೋರಿಸುವ ಮುಖ್ಯಮಂತ್ರಿಗಳೇ, ನಿಮ್ಮ ಸರ್ಕಾರ ಇಲ್ಲೇಕೆ ಇದೆ ಎಂದು ರಾಜ್ಯದ ರೈತರು ಪ್ರಶ್ನಿಸುತ್ತಿದ್ದಾರೆ” ಎಂದು ಆಕ್ರೋಶ ಹೊರಹಾಕಿದರು.

​ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ಆಹ್ವಾನ

ಒಂದೆಡೆ ದಲಿತರ ಹಣ ಲೂಟಿಯಾಗುತ್ತಿದೆ, ಮತ್ತೊಂದೆಡೆ ಯುವಜನತೆಗೆ ಉದ್ಯೋಗವಿಲ್ಲದೆ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ ವಿಜಯೇಂದ್ರ, “ಈ ಭ್ರಷ್ಟ, ಜನವಿರೋಧಿ, ದಲಿತವಿರೋಧಿ ಹಾಗೂ ರೈತವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಬುಡಸಮೇತ ಕಿತ್ತೊಗೆಯುವ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಬೇಕಿದೆ” ಎಂದು ಕರೆ ನೀಡಿದರು.

​ಇದೇ ವೇಳೆ ಪಾದಯಾತ್ರೆಯ ಮೊದಲ ದಿನದ ಯಶಸ್ಸಿಗೆ ಶ್ರಮಿಸಿದ ಪಕ್ಷದ ಹಿರಿಯ ನಾಯಕರು, ಶಾಸಕರು, ಸಂಸದರು ಹಾಗೂ ಕಾರ್ಯಕರ್ತರಿಗೆ ವಿಜಯೇಂದ್ರ ಅವರು ಧನ್ಯವಾದ ಸಲ್ಲಿಸಿದರು.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!