ಬಳ್ಳಾರಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ‘ನಂದಿನಿ’ ಜಾಗೃತಿ ಕಾರ್ಯಕ್ರಮ ಹಾಗೂ ಚಿತ್ರಕಲಾ ಸ್ಪರ್ಧೆ

ಬಳ್ಳಾರಿ: ಕರ್ನಾಟಕ ಸಹಕಾರ ಹಾಲು ಮಹಾಮಂಡಳಿ (ಕೆಎಂಎಫ್) ಹಾಗೂ ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ರಾಬಕೊವಿ) ಜಂಟಿ ಆಶ್ರಯದಲ್ಲಿ ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಗುರುವಾರ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಹಾಗೂ ನಂದಿನಿ ಉತ್ಪನ್ನಗಳ ಕುರಿತು ಜಾಗೃತಿ ಕಾರ್ಯಕ್ರಮ ಸಂಘಟಿಸಲಾಗಿತ್ತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಎಸ್. ಸುದರ್ಶನ್ ರೆಡ್ಡಿ, ಮಾನವನ ದೈನಂದಿನ ಆರೋಗ್ಯದಲ್ಲಿ ಹಾಲಿನ ಪೌಷ್ಟಿಕತೆಯ ಮಹತ್ವವನ್ನು ವಿವರಿಸಿದರು. ಹಾಲಿನಲ್ಲಿರುವ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ವಿಟಮಿನ್-ಬಿ2 ಪೋಷಕಾಂಶಗಳು ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾಗಿವೆ ಎಂದು ತಿಳಿಸಿದ ಅವರು, ಒಕ್ಕೂಟವು ಪ್ರತಿದಿನ ಸುಮಾರು ೨.೫೦ ಲಕ್ಷ ಲೀಟರ್ ಶುದ್ಧ ಹಾಲನ್ನು ಸಂಸ್ಕರಿಸಿ ಪೂರೈಸುತ್ತಿದ್ದು, ಸರ್ಕಾರದ ‘ಕ್ಷೀರಭಾಗ್ಯ’ ಮತ್ತು ‘ಕ್ಷೀರಧಾರೆ’ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ ಎಂದರು.
ಇದೇ ವೇಳೆ ಐಸ್ಕ್ರೀಂ ಘಟಕದ ಅಪರ ನಿರ್ದೇಶಕ ರವಿಕಿರಣ್ ಅವರು ಶುದ್ಧ ನಂದಿನಿ ಐಸ್ಕ್ರೀಂ ಹಾಗೂ ಫ್ರೋಜನ್ ಡೆಸರ್ಟ್ಗಳ ನಡುವಿನ ವ್ಯತ್ಯಾಸವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರೆ, ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ವಿ. ನಾಗರಾಜ ಶರ್ಮ ನಂದಿನಿ ಉತ್ಪನ್ನಗಳ ಬಳಕೆಯಿಂದಾಗುವ ಆರೋಗ್ಯಕಾರಿ ಪ್ರಯೋಜನಗಳನ್ನು ಹಂಚಿಕೊಂಡರು.
ಚಿತ್ರಕಲಾ ಸ್ಪರ್ಧೆ ಹಾಗೂ ಬಹುಮಾನ ವಿತರಣೆ:
ವಿದ್ಯಾರ್ಥಿಗಳಿಗೆ ಹಾಲಿನ ಶೇಖರಣೆ ಮತ್ತು ಸಂಸ್ಕರಣಾ ವಿಧಾನಗಳ ಕುರಿತು ಕಿರುಚಿತ್ರ ಪ್ರದರ್ಶಿಸಲಾಯಿತು. ತದನಂತರ ಹಮ್ಮಿಕೊಳ್ಳಲಾಗಿದ್ದ ಚಿತ್ರಕಲಾ ಹಾಗೂ ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಆಕರ್ಷಕ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲೆ ಸರಸ್ವತಿ, ಒಕ್ಕೂಟದ ಸಹಾಯಕ ವ್ಯವಸ್ಥಾಪಕರಾದ ಕೆ.ಆರ್. ಇಂದುಕಲಾ, ಜ್ಯೋತಿ, ಮಾರುಕಟ್ಟೆ ಮೇಲ್ವಿಚಾರಕರಾದ ಲೋಹಿತಕುಮಾರ್, ಪ್ರಸನ್ನಕುಮಾರ್, ಕೆಮಿಸ್ಟ್ ಹೆಚ್. ಸರೋಜ ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.



