ಪುತ್ತೂರು: ಉಕ್ಕಿ ಹರಿಯುವ ಹೊಳೆಯಲ್ಲಿ ಈಜಿ ವಿದ್ಯುತ್ ತಂತಿ ಮರುಜೋಡಣೆ; ಮೆಸ್ಕಾಂ ಪವರ್ಮ್ಯಾನ್ ಸಾಹಸಕ್ಕೆ ಶ್ಲಾಘನೆ

ಪುತ್ತೂರು: ಜೀವದ ಹಿತವನ್ನೂ ಲೆಕ್ಕಿಸದೆ ಭೋರ್ಗರೆದು ಹರಿಯುತ್ತಿದ್ದ ಹೊಳೆಯಲ್ಲಿ ಈಜಿ ಸಾಗಿ ಕಡಿದು ಬಿದ್ದಿದ್ದ ವಿದ್ಯುತ್ ತಂತಿಯನ್ನು ಮರುಜೋಡಿಸುವ ಮೂಲಕ ಮೆಸ್ಕಾಂ ಲೈನ್ಮ್ಯಾನ್ ಒಬ್ಬರು ಸಾಹಸಮಯ ಕರ್ತವ್ಯ ಪ್ರಜ್ಞೆ ಮೆರೆದು ಸಾರ್ವಜನಿಕರ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಧೂಮಡ್ಕ ಎಂಬಲ್ಲಿ ಈ ಘಟನೆ ನಡೆದಿದೆ. ಧೂಮಡ್ಕ ಪ್ರದೇಶದಲ್ಲಿ ಹಾದುಹೋಗುವ ಸೀರೆ ಹೊಳೆಗೆ ವಿದ್ಯುತ್ ತಂತಿ ಕಡಿದು ಬಿದ್ದಿದ್ದರಿಂದ ಸುತ್ತಮುತ್ತಲ ಹಲವು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿತ್ತು.
ಜೀವದ ಹಿತ ಲೆಕ್ಕಿಸದೆ ಸೀರೆ ನದಿಗಿಳಿದ ಬಂದೇ ನವಾಜ್:
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಬೆಟ್ಟಂಪಾಡಿ ಮೆಸ್ಕಾಂ ಉಪವಿಭಾಗದ ಲೈನ್ಮ್ಯಾನ್ ಬಂದೇ ನವಾಜ್, ಭಾರಿ ರಿಸ್ಕ್ ತೆಗೆದುಕೊಂಡು ಉಕ್ಕಿ ಹರಿಯುತ್ತಿದ್ದ ಸೀರೆ ನದಿಯಲ್ಲಿ ಈಜಿಕೊಂಡು ಎದುರು ದಡ ತಲುಪಿದ್ದಾರೆ. ಬಳಿಕ ಕಡಿದು ಬಿದ್ದಿದ್ದ ತಂತಿಯನ್ನು ಯಶಸ್ವಿಯಾಗಿ ಮರುಜೋಡಿಸಿ ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸಿದ್ದಾರೆ.
ಲೈನ್ಮ್ಯಾನ್ ಬಂದೇ ನವಾಜ್ ಅವರ ಈ ಸಾಹಸಮಯ ಹಾಗೂ ಶ್ರಮದಾಯಕ ಕರ್ತವ್ಯ ಪ್ರಜ್ಞೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವರ ಸಮಯಪ್ರಜ್ಞೆ ಮತ್ತು ಧೈರ್ಯಕ್ಕೆ ಸಾರ್ವಜನಿಕರು ಹಾಗೂ ಮೆಸ್ಕಾಂ ಹಿರಿಯ ಅಧಿಕಾರಿಗಳಿಂದ ವ್ಯಾಪಕ ಮೆಚ್ಚುಗೆ ಹಾಗೂ ಶ್ಲಾಘನೆ ವ್ಯಕ್ತವಾಗಿದೆ.



