ಮಹಾಲಕ್ಷ್ಮೀ ಬ್ಯಾಂಕ್ ಬಹುಕೋಟಿ ಹಗರಣ: ಎಸ್‌ಐಟಿ ತನಿಖೆಗೆ ವಿಧಾನ ಪರಿಷತ್‌ನಲ್ಲಿ ಬಿ.ಕೆ. ಹರಿಪ್ರಸಾದ್ ಒತ್ತಾಯ

ಬೆಂಗಳೂರು: ಉಡುಪಿ ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷತೆಯ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ ₹150 ಕೋಟಿಗೂ ಹೆಚ್ಚಿನ ಮೊತ್ತದ ವಂಚನೆ ಹಾಗೂ ಬ್ಯಾಂಕ್ ಮಲ್ಪೆ ಶಾಖೆಯ ವ್ಯವಸ್ಥಾಪಕರ ಅಸಹಜ ಸಾವಿನ ಪ್ರಕರಣವನ್ನು ವಿಶೇಷ ತನಿಖಾ ತಂಡದಿಂದ (SIT) ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮಹಾಲಕ್ಷ್ಮೀ ಸಹಕಾರಿ ಬ್ಯಾಂಕ್‌ನಲ್ಲಿ 100ಕ್ಕೂ ಅಧಿಕ ಗ್ರಾಹಕರಿಗೆ ಭಾರಿ ಪ್ರಮಾಣದ ಹಣ ವಂಚನೆಯಾಗಿದೆ ಎಂದು ಆರೋಪಿಸಿದ ಅವರು, ಈ ಪ್ರಕರಣದಲ್ಲಿ ಮಲ್ಪೆ ಶಾಖೆಯ ವ್ಯವಸ್ಥಾಪಕ ಸುಬ್ಬಣ್ಣ ಅವರ ಅಸಹಜ ಸಾವಿನ ತನಿಖೆಯೂ ಅತ್ಯಂತ ಅಗತ್ಯವಾಗಿದೆ ಎಂದಿದ್ದಾರೆ. ಮೇಲ್ನೋಟಕ್ಕೆ ಸುಬ್ಬಣ್ಣ ಅವರ ಸಾವು ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತಿದ್ದರೂ, ಇದು ಆತ್ಮಹತ್ಯೆಯಲ್ಲ, ಕೊಲೆ ಎಂಬ ಅನುಮಾನಗಳಿವೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಪರಿಷತ್‌ನಲ್ಲಿ ಪ್ರಸ್ತಾಪಿಸಲು ಕಾರಣ:
ವಂಚನೆಗೆ ಒಳಗಾದ ಗ್ರಾಹಕರು ‘ಮಹಾಲಕ್ಷ್ಮೀ ಬ್ಯಾಂಕ್ ಸಂತ್ರಸ್ತ ಗ್ರಾಹಕರ ಹಿತರಕ್ಷಣಾ ವೇದಿಕೆ’ ರಚಿಸಿಕೊಂಡು ಹೋರಾಟ ನಡೆಸುತ್ತಿದ್ದಾರೆ. ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಯಶಪಾಲ್ ಸುವರ್ಣ ತಮ್ಮ ರಾಜಕೀಯ ಪ್ರಭಾವ ಬಳಸಿ ತನಿಖೆಗೆ ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ನಾಗೇಂದ್ರ ಪುತ್ರನ್ ಕೋಟ ಅವರು ಇತ್ತೀಚೆಗೆ ಬಿ.ಕೆ. ಹರಿಪ್ರಸಾದ್ ಅವರನ್ನು ಭೇಟಿ ಮಾಡಿ ಸಂತ್ರಸ್ತರಿಗೆ ನ್ಯಾಯ ಕೊಡಿಸುವಂತೆ ಮನವಿ ಸಲ್ಲಿಸಿದ್ದರು. ಈ ಮನವಿಯ ಮೇರೆಗೆ ಹರಿಪ್ರಸಾದ್ ಅವರು ವಿಧಾನ ಪರಿಷತ್‌ನಲ್ಲಿ ವಿಷಯ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದಿದ್ದಾರೆ.
ಗ್ರಾಹಕರ ಹಣದ ದುರ್ಬಳಕೆ ಹಾಗೂ ವ್ಯವಸ್ಥಾಪಕರ ಸಾವಿನ ಹಿಂದಿರುವ ನಿಜವಾದ ಸತ್ಯಾಸತ್ಯತೆ ಹೊರಬರಬೇಕಾದರೆ ಯಾವುದೇ ಮುಲಾಜಿಲ್ಲದೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಹೀಗಾಗಿ ಸರ್ಕಾರ ತಕ್ಷಣವೇ ಎಸ್‌ಐಟಿ ರಚಿಸಿ ತನಿಖೆ ನಡೆಸಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ.



