ಅಪಘಾತ ತಡೆಯಲು ಬೀದರ್ ಪೊಲೀಸರ ವಿಶೇಷ ಕ್ರಮ: ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸಲು ಪಿ.ಎಸ್.ಐ ಹುಲೆಪ್ಪ ಸಲಹೆ

ಹುಮನಾಬಾದ್ : ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರದೀಪ್ ಗುಂಟಿ (ಐ.ಪಿ.ಎಸ್) ಅವರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ ಹುಮನಾಬಾದ್ ಸಂಚಾರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಹುಮನಾಬಾದ್ ಸಂಚಾರಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಹುಲೆಪ್ಪಾ ಅವರ ನೇತೃತ್ವದಲ್ಲಿ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ಕಾನೂನುಗಳ ಕುರಿತು ಜಾಗೃತಿ ಮೂಡಿಸಿದರು.
ಅಪ್ರಾಪ್ತರಿಗೆ ವಾಹನ ನೀಡಿದರೆ ಅಪರಾಧ!
ಕಾರ್ಯಕ್ರಮದಲ್ಲಿ ಮಾತನಾಡಿದ ಪೊಲೀಸರು, ೧೮ ವರ್ಷದೊಳಗಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ವಾಹನ ಚಲಾಯಿಸಲು ನೀಡಬಾರದು, ಇದು ಕಾನೂನಿನ ಪ್ರಕಾರ ಅಪರಾಧ ಎಂದು ಸಾರ್ವಜನಿಕರಿಗೆ ಎಚ್ಚರಿಸಿದರು. ಅಲ್ಲದೆ, ಪ್ರತಿಯೊಬ್ಬ ನಾಗರಿಕರೂ ತಮ್ಮ ಮನೆಯಲ್ಲಿ ಹಾಗೂ ಅಕ್ಕಪಕ್ಕದವರಲ್ಲಿ ಜಾಗೃತಿ ಮೂಡಿಸಿ, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಮತ್ತು ಕಾರು ಚಾಲಕರು ಸೀಟ್ ಬೆಲ್ಟ್ ಧರಿಸುವಂತೆ ತಿಳಿಹೇಳಬೇಕು ಎಂದು ಮನವಿ ಮಾಡಿದರು.
ಅಪಘಾತ ಮುಕ್ತ ಜಿಲ್ಲೆಗೆ ಸಹಕಾರ ನೀಡಲು ಕೋರಿಕೆ
ಜಿಲ್ಲೆಯಲ್ಲಿ ಸಂಭವಿಸುವ ರಸ್ತೆ ಅಪಘಾತಗಳ ಪ್ರಮಾಣವನ್ನು ಗಣನೀಯವಾಗಿ ಇಳಿಸುವ ನಿಟ್ಟಿನಲ್ಲಿ ಬೀದರ್ ಜಿಲ್ಲಾ ಪೊಲೀಸರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇಲಾಖೆಯ ಈ ಪ್ರಶಂಸನೀಯ ಪ್ರಯತ್ನಕ್ಕೆ ಜಿಲ್ಲೆಯ ಪ್ರತಿಯೊಬ್ಬ ನಾಗರಿಕರು ಹಾಗೂ ವಾಹನ ಚಾಲಕರು ಸಂಪೂರ್ಣ ಸಹಕಾರ ನೀಡಬೇಕಾಗಿ ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರದೀಪ್ ಗುಂಟಿ (ಐ.ಪಿ.ಎಸ್) ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.



