ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ನವದೆಹಲಿಯಲ್ಲಿ ಧ್ವನಿ: ಅಕ್ರಮ ಆಮದು ತಡೆಗೆ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ

ನವದೆಹಲಿ: ದೇಶೀಯ ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ಅಕ್ರಮ ಆಮದು ಹಾಗೂ ಕಳ್ಳಸಾಗಣೆ ಸಮಸ್ಯೆಗೆ ತಕ್ಷಣವೇ ಬ್ರೇಕ್ ಹಾಕುವಂತೆ ಆಗ್ರಹಿಸಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರಿಗೆ ನವದೆಹಲಿಯಲ್ಲಿ ಸುದೀರ್ಘ ಮನವಿ ಸಲ್ಲಿಸಲಾಯಿತು.
ಹಿರಿಯ ನಾಯಕ ಶ್ರೀ ಆರಗ ಜ್ಞಾನೇಂದ್ರ, ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ‘ಕ್ಯಾಂಪ್ಕೋ’ (CAMPCO) ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸತೀಶ್ ಚಂದ್ರ, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸತ್ಯನಾರಾಯಣ ಸೇರಿದಂತೆ ಪ್ರಮುಖ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿಯೋಗವು ಗೃಹ ಸಚಿವರನ್ನು ಭೇಟಿ ಮಾಡಿ ಚರ್ಚಿಸಿತು.
ಕರ್ನಾಟಕ ಸೇರಿದಂತೆ ದೇಶದ ಲಕ್ಷಾಂತರ ಅಡಿಕೆ ಬೆಳೆಗಾರ ರೈತ ಕುಟುಂಬಗಳು ವಿದೇಶಿ ಅಡಿಕೆಯ ಅಕ್ರಮ ನುಸುಳುವಿಕೆಯಿಂದ ತೀವ್ರ ಮಾರುಕಟ್ಟೆ ಸಂಕಷ್ಟ ಎದುರಿಸುತ್ತಿದ್ದು, ಈ ಕುರಿತು ಸಚಿವರ ಗಮನ ಸೆಳೆಯಲಾಯಿತು.
ನಿಯೋಗದ ಪ್ರಮುಖ ಬೇಡಿಕೆಗಳು:
ಕನಿಷ್ಠ ಆಮದು ಬೆಲೆ (MIP) ಕಟ್ಟುನಿಟ್ಟಿನ ಜಾರಿ: ಪ್ರತಿ ಕೆಜಿಗೆ ನಿಗದಿಪಡಿಸಲಾಗಿರುವ ₹351 ಕನಿಷ್ಠ ಆಮದು ಬೆಲೆಯನ್ನು ಗಡಿ ಹಾಗೂ ಬಂದರುಗಳಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.
ಸುಳ್ಳು ಘೋಷಣೆ ಹಾಗೂ ದುರುಪಯೋಗ ತಡೆ: ‘ಹುರಿದ ಒಣಹಣ್ಣುಗಳು ಮತ್ತು ಬೀಜಗಳು’ (ITC HS 20081991) ಎಂದು ಸುಳ್ಳು ಮಾಹಿತಿ ನೀಡಿ ಕಾನೂನುಬಾಹಿರವಾಗಿ ಅಡಿಕೆ ಆಮದು ಮಾಡಿಕೊಳ್ಳುವುದನ್ನು ತಡೆಯಲು ಪ್ರವೇಶ ದ್ವಾರಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕು.
ಜಂಟಿ ತನಿಖಾ ಪಡೆ ರಚನೆ: ಗೃಹ ಸಚಿವಾಲಯ, ವಾಣಿಜ್ಯ ಸಚಿವಾಲಯ, CBIC, DRI ಹಾಗೂ ಕಸ್ಟಮ್ಸ್ ಇಲಾಖೆಗಳ ಸಮನ್ವಯದೊಂದಿಗೆ ಅಕ್ರಮ ಕಳ್ಳಸಾಗಣೆ ಜಾಲವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲು ಜಂಟಿ ಕಾರ್ಯತಂತ್ರ ರೂಪಿಸಬೇಕು.
ನಮ್ಮ ದೇಶೀಯ ರೈತರು ಯಾವುದೇ ಹೆಚ್ಚಿನ ಕೊಡುಗೆಯನ್ನು ಕೇಳುತ್ತಿಲ್ಲ, ಬದಲಾಗಿ ನ್ಯಾಯಯುತ ಮಾರುಕಟ್ಟೆ ಮತ್ತು ಜಾರಿಯಲ್ಲಿರುವ ಕಾನೂನಿನ ಸೂಕ್ತ ಜಾರಿಯನ್ನು ಮಾತ್ರ ಅಪೇಕ್ಷಿಸುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಬೆಂಬಲದೊಂದಿಗೆ ಅಡಿಕೆ ಬೆಳೆಗಾರರ ಸಮಸ್ಯೆಗೆ ಶೀಘ್ರದಲ್ಲೇ ಶಾಶ್ವತ ಪರಿಹಾರ ಸಿಗಲಿದೆ ಎಂಬ ವಿಶ್ವಾಸವನ್ನು ನಿಯೋಗ ವ್ಯಕ್ತಪಡಿಸಿದೆ.



