ಜಿಲ್ಲಾ ಸುದ್ದಿಕ್ರೈಂ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿ

ಮಾಲೂರು ಜಡ್ಜ್‌ ರಸ್ತೆಯಲ್ಲೇ ರಂಪಾಟ ಪ್ರಕರಣ: ಹೈಕೋರ್ಟ್ ಗರಂ, ಜಡ್ಜ್ ದೂರಿನ್ FIRಗೆ ಬ್ರೇಕ್!

Share News

ಕೋಲಾರ/ಮಾಲೂರು: ಮಾಲೂರಿನ ಸಿವಿಲ್ ನ್ಯಾಯಾಧೀಶೆ ಗಾಯತ್ರಿ ಅವರು ಬೈಕ್ ಸವಾರ ಹಾಗೂ ಆತನ ಕುಟುಂಬಸ್ಥರ ವಿರುದ್ಧ ದಾಖಲಿಸಿದ್ದ ಎಫ್‌ಐಆರ್ (FIR) ತನಿಖೆಗೆ ಉಚ್ಚ ನ್ಯಾಯಾಲಯ (ಹೈಕೋರ್ಟ್) ಮಧ್ಯಂತರ ತಡೆಯಾಜ್ಞೆ ನೀಡಿದೆ. ರಸ್ತೆ ಮಧ್ಯೆ ನ್ಯಾಯಾಧೀಶರ ಪ್ರದರ್ಶಿತ ನಡವಳಿಕೆ ಹಾಗೂ ರೋಷಾವೇಷದ ಬಗ್ಗೆ ಉಚ್ಚ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರಕರಣದಲ್ಲಿ ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶ ರವಾನಿಸಿದೆ.

ಜುಲೈ 18 ರಂದು ಮಾಲೂರಿನಲ್ಲಿ ಜಡ್ಜ್ ಗಾಯತ್ರಿ ಅವರು ಸಂಚರಿಸುತ್ತಿದ್ದ ಕಾರಿನ ಚಾಲನೆಯನ್ನು ಪ್ರಶ್ನಿಸಿದ್ದ ಬೈಕ್ ಸವಾರ ವಿನಯ್, ದಾರಿ ಬಿಡುವಂತೆ ಕೈಸನ್ನೆ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ನ್ಯಾಯಾಧೀಶರು, ರಸ್ತೆ ಮಧ್ಯದಲ್ಲೇ ಬೈಕ್ ತಡೆದು ವಿನಯ್ ಹಾಗೂ ಆತನ ತಾಯಿ ಕವಿತಾ ಅವರೊಂದಿಗೆ ಸಾರ್ವಜನಿಕವಾಗಿ ಕೂಗಾಡಿ ರಂಪಾಟ ನಡೆಸಿದ್ದರು. ಅಷ್ಟೇ ಅಲ್ಲದೆ, ಸ್ಥಳದಲ್ಲಿದ್ದ ಪೊಲೀಸರ ಮೂಲಕ ಬೈಕ್ ಸವಾರ ವಿನಯ್ ಕಪಾಳಕ್ಕೆ ಬಾರಿಸುವಂತೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಇಡೀ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಘಟನೆ ಬಳಿಕ ಜಡ್ಜ್ ಗಾಯತ್ರಿ ಅವರು ಬೈಕ್ ಚಾಲಕ ವಿನಯ್, ಕವಿತಾ ಹಾಗೂ ವೆಂಕಟೇಶ್ ವಿರುದ್ಧ ದೂರು ದಾಖಲಿಸಿದ್ದರು. ಈ ನಡುವೆ ಮಾಲೂರು ವಕೀಲರ ಸಂಘ ಜಡ್ಜ್‌ ಪರವಾಗಿ ಬೆಂಬಲ ಸೂಚಿಸಿತ್ತು. ಆದರೆ, ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸಂತ್ರಸ್ತರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಜಡ್ಜ್ ಗಾಯತ್ರಿ ಅವರು ನೀಡಿದ್ದ ದೂರಿನ ಆಧಾರಿತ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿದ್ದಾರೆ. ಅಲ್ಲದೆ, ರಸ್ತೆಯಲ್ಲಿ ನ್ಯಾಯಾಧೀಶರ ವರ್ತನೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ಮುಂದಿನ ಸೂಕ್ತ ಕ್ರಮಕ್ಕಾಗಿ ಈ ವಿಷಯವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ (CJ) ಗಮನಕ್ಕೆ ತರುವಂತೆ ರಿಜಿಸ್ಟ್ರಾರ್ ಜನರಲ್‌ಗೆ ಸೂಚಿಸಿದೆ.

​ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಎಂಬುದನ್ನು ಸಾಬೀತುಪಡಿಸಿರುವ ಹೈಕೋರ್ಟ್‌ನ ಈ ಕಟ್ಟುನಿಟ್ಟಿನ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಪ್ರಶಂಸೆ ವ್ಯಕ್ತವಾಗಿದ್ದು, ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆ ಮತ್ತಷ್ಟು ಗಟ್ಟಿಯಾಗಿದೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!