ನಗರಸಭೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ – ವಾರ್ಡ್ ನಂ. 6ರಲ್ಲಿ ಕಸದ ರಾಶಿ, ದುರ್ವಾಸನೆಯಿಂದ ನಿವಾಸಿಗಳ ತೀವ್ರ ತೊಂದರೆ

ಯಾದಗಿರಿ: ನಗರದ ವಾರ್ಡ್ ಸಂಖ್ಯೆ 6ರಲ್ಲಿ ಸಾರ್ವಜನಿಕ ಶೌಚಾಲಯದ ಮುಂಭಾಗದ ರಸ್ತೆಯಲ್ಲಿ ಕಸ ಹಾಗೂ ತ್ಯಾಜ್ಯ ವಸ್ತುಗಳು ದೀರ್ಘಕಾಲದಿಂದ ತೆರವುಗೊಳ್ಳದೆ ಬಿದ್ದಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಕಿರಿಕಿರಿ ಮತ್ತು ಸಂಕಷ್ಟ ಅನುಭವಿಸುವಂತಾಗಿದೆ. ರಸ್ತೆ ತುಂಬಾ ಕಸದ ರಾಶಿಯೇ ಆವರಿಸಿಕೊಂಡಿದ್ದು, ಜನರು ಅನಿವಾರ್ಯವಾಗಿ ಇದೇ ದುರ್ವಾಸನೆಯುಕ್ತ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ.
ಹಲವು ವರ್ಷಗಳಿಂದ ಈ ಪ್ರದೇಶದ ನೈರ್ಮಲ್ಯ ಹಾಗೂ ಸ್ವಚ್ಛತೆಗೆ ಯಾದಗಿರಿ ನಗರಸಭೆ ಯಾವುದೇ ರೀತಿಯ ಸಮರ್ಪಕ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ. ದಿನೇ ದಿನೇ ಕಸದ ರಾಶಿಯಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದ್ದು, ಸೊಳ್ಳೆ ಹಾಗೂ ಕೀಟಗಳ ಕಾಟ ವಿಪರೀತವಾಗಿದೆ. ಇದರಿಂದ ಸ್ಥಳೀಯರ ಆರೋಗ್ಯಕ್ಕೂ ಆಪತ್ತು ಎದುರಾಗುವ ಸನ್ನಿವೇಶ ನಿರ್ಮಾಣವಾಗಿದೆ.
ನಗರಸಭೆಯಲ್ಲಿ ನೈರ್ಮಲ್ಯ ಮತ್ತು ಸ್ವಚ್ಛತಾ ವ್ಯವಸ್ಥೆಯ ಉಸ್ತುವಾರಿಗಾಗಿ ಸ್ಯಾನಿಟರಿ ಇನ್ಸ್ಪೆಕ್ಟರ್ ನೇಮಕಗೊಂಡಿದ್ದರೂ, ಅವರು ಈವರೆಗೂ ಈ ವಾರ್ಡ್ಗೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿಲ್ಲ ಎಂದು ನಿವಾಸಿಗಳು ದೂರಿದ್ದಾರೆ. “ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ರಸ್ತೆಯಲ್ಲಿ ಬಿದ್ದಿರುವ ಕಸದ ರಾಶಿಯನ್ನು ತೆರವುಗೊಳಿಸಿ, ವಾರ್ಡ್ನಲ್ಲಿ ನಿಯಮಿತವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ಸಾರ್ವಜನಿಕ ಶೌಚಾಲಯದ ಸುತ್ತಮುತ್ತಲಿನ ಪ್ರದೇಶವನ್ನು ನೈರ್ಮಲ್ಯದಿಂದ ಕೂಡಿರುವಂತೆ ನೋಡಿಕೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ನಗರಸಭೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.



