ಕುಡಿದ ಅಮಲಿನಲ್ಲಿ ರಸ್ತೆ ಬದಿಯ ಕಾನ್ವೆಕ್ಸ್ ಮಿರರ್ ಕದ್ದ ಯುವಕರು – ಪೊಲೀಸರಿಂದ ಕಳ್ಳರಿಂದಲೇ ಮರು ಜೋಡಣೆ!

ಸಂಪಾಜೆ: ಕುಡಿದ ಅಮಲಿನಲ್ಲಿ ಹೆದ್ದಾರಿ ಬದಿಯಲ್ಲಿದ್ದ ಕಾನ್ವೆಕ್ಸ್ ಮಿರರ್ (Convex Mirror) ಕದ್ದೊಯ್ದ ಯುವಕರನ್ನು ಸಿಸಿಟಿವಿ ಆಧರಿಸಿ ಪತ್ತೆ ಹಚ್ಚಿದ ಪೊಲೀಸರು, ಅವರಿಂದಲೇ ಆ ಕನ್ನಡಿಯನ್ನು ಮರಳಿ ಜೋಡಿಸಿ ಬುದ್ಧಿಕಲಿಸಿದ ವಿಶಿಷ್ಟ ಘಟನೆ ಜುಲೈ 26ರಂದು ನಡೆದಿದೆ.
ಪುತ್ತೂರು ಮೂಲದ ಶ್ರೇಯಸ್ ಕುಮಾರ್ ಮತ್ತು ಪ್ರೀತಮ್ ರೈ ಎಂಬ ಯುವಕರು ಕಾರಿನಲ್ಲಿ ಪುತ್ತೂರಿನಿಂದ ಮಡಿಕೇರಿಗೆ ತೆರಳುತ್ತಿದ್ದರು. ಈ ವೇಳೆ ಸಂಪಾಜೆ ಗ್ರಾಮದ ಚಡಾವಿನ ಬಳಿ ಅಪಘಾತ ತಡೆಯಲು ರಾಜ್ಯ ಹೆದ್ದಾರಿ ಬದಿ ಅಳವಡಿಸಲಾಗಿದ್ದ ಕಾನ್ವೆಕ್ಸ್ ಮಿರರ್ ಅನ್ನು ತಡರಾತ್ರಿ ಬಿಚ್ಚಿ, ತಮ್ಮ ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಹೋಗಿದ್ದಾರೆ. ಬಳಿಕ ಮಡಿಕೇರಿಯ ರಾಜಾಸೀಟ್ ಸೇರಿದಂತೆ ವಿವಿಧೆಡೆ ಸುತ್ತಾಡಿ ಅದೇ ರಸ್ತೆಯಲ್ಲಿ ಪುತ್ತೂರಿಗೆ ಮರಳಿದ್ದಾರೆ.
ಮಾರನೇ ದಿನ ರಸ್ತೆ ಬದಿಯ ಕನ್ನಡಿ ಮಾಯವಾಗಿರುವುದನ್ನು ಗಮನಿಸಿದ ಸ್ಥಳೀಯರು, ಹತ್ತಿರದ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಯುವಕರಿಬ್ಬರು ಕಳ್ಳತನ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಥಳೀಯರು ಪೊಲೀಸರ ಗಮನಕ್ಕೆ ತಂದಿದ್ದಾರೆ.
ದೃಶ್ಯದಲ್ಲಿದ್ದ ಕಾರಿನ ನೋಂದಣಿ ಸಂಖ್ಯೆಯನ್ನಾಧರಿಸಿ ತನಿಖೆ ನಡೆಸಿದ ಪೊಲೀಸರು, ಯುವಕರ ದೂರವಾಣಿ ಸಂಖ್ಯೆ ಪಡೆದು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮದ್ಯದ ಅಮಲಿನಲ್ಲಿ ಈ ಕೃತ್ಯ ಎಸಗಿರುವುದಾಗಿ ಯುವಕರು ಒಪ್ಪಿಕೊಂಡಿದ್ದಾರೆ.
ಘಟನೆಯ ಬಳಿಕ ಪೊಲೀಸರು ಕಳ್ಳತನ ಮಾಡಿದ ಯುವಕರಿಂದಲೇ ಕನ್ನಡಿ ಕದ್ದ ಸ್ಥಳಕ್ಕೆ ಕರೆದೊಯ್ದು, ಅವರಿಂದಲೇ ಮರಳಿ ಕನ್ನಡಿ ಜೋಡಿಸುವ ಕೆಲಸ ಮಾಡಿಸಿದ್ದಾರೆ. ನಂತರ ಅವರಿಗೆ ಸೂಕ್ತ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಪೊಲೀಸರ ಈ ಸಮಯೋಚಿತ ಮತ್ತು ವಿಶಿಷ್ಟ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.



