ದೇವರ ದರ್ಶನದ ನೆಪದಲ್ಲಿ ಅಪ್ರಾಪ್ತೆಗೆ ಮದ್ಯಪಾನ ಮಾಡಿಸಿ ಗ್ಯಾಂಗ್‌ರೇಪ್ – ಮೂವರು ಆರೋಪಿಗಳ ಬಂಧನ

ದೇವನಹಳ್ಳಿ: ದೇವರ ದರ್ಶನಕ್ಕೆ ಕರೆದೊಯ್ಯುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿಗೆ ಬಲವಂತವಾಗಿ ಮದ್ಯಪಾನ ಮಾಡಿಸಿ, ಸಮೂಹ ಅತ್ಯಾಚಾರ ಎಸಗಿದ ಭೀಕರ ಹಾಗೂ ಅಮಾನವೀಯ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಜುಲೈ 17ರ ರಾತ್ರಿ ರೇಣುಕಾ ಎಂಬಾಕೆ ದೇವಸ್ಥಾನಕ್ಕೆ ಹೋಗೋಣ ಎಂದು ಹೇಳಿ ಬಾಲಕಿಯನ್ನು ನಂಬಿಸಿ ಕರೆದುಕೊಂಡು ಬಂದಿದ್ದಳು. ಆ ಬಳಿಕ ನವೀನ್ ಮತ್ತು ವೆಂಕಟರಮಣ ಎಂಬ ಇಬ್ಬರು ಆರೋಪಿಗಳು ಆಟೋದಲ್ಲಿ ಬಾಲಕಿಯನ್ನು ಬೇರೆಡೆಗೆ ಕರೆದೊಯ್ದು, ಬಲವಂತವಾಗಿ ಮದ್ಯಪಾನ ಮಾಡಿಸಿ ತೀವ್ರ ಹಲ್ಲೆ ನಡೆಸಿದ್ದಾರೆ. ನಂತರ ನಿರ್ಮಾಣ ಹಂತದ ಕಟ್ಟಡವೊಂದಕ್ಕೆ ಕರೆದೊಯ್ದು ರಾತ್ರಿ ಪೂರ್ತಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಮರುದಿನ ಬೆಳಿಗ್ಗೆ ಬಾಲಕಿಯನ್ನು ಮನೆ ಬಳಿ ಬಿಟ್ಟು, ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಆರೋಪಿಗಳು ಪರಾರಿಯಾಗಿದ್ದರು. ಮನೆಗೆ ಬಂದ ಮಗಳ ಸ್ಥಿತಿಯನ್ನು ಕಂಡು ಅನುಮಾನಗೊಂಡ ತಾಯಿ ಪ್ರಶ್ನಿಸಿದಾಗ ಈ ದಾರುಣ ಕೃತ್ಯ ಬೆಳಕಿಗೆ ಬಂದಿದೆ.
ಘಟನೆ ಕುರಿತು ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತಕ್ಷಣವೇ ಕಾರ್ಯಾಚರಣೆ ನಡೆಸಿ ನವೀನ್, ವೆಂಕಟರಮಣ ಹಾಗೂ ರೇಣುಕಾ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರ ವಿರುದ್ಧ ಪೋಕ್ಸೋ (POCSO) ಕಾಯ್ದೆ ಹಾಗೂ ವಿವಿಧ ಕಠಿಣ ತಡೆಯಾಜ್ಞೆ ಕಲಂ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ.



