ಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ಕುರಕುಂದಿಯಲ್ಲಿ ಚರಂಡಿ ತುಂಬಿ ರಸ್ತೆ ಮೇಲೆ ಹರಿಯುತ್ತಿರುವ ಕೊಳಚೆ ನೀರು: ಪಿಡಿಓ ನಡೆಗೆ ಸಾರ್ವಜನಿಕರ ಆಕ್ರೋಶ, ಕಠಿಣ ಕ್ರಮಕ್ಕೆ ಆಗ್ರಹ

Share News

ಯಾದಗಿರಿ (ವಡಗೇರಾ): ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕುರಕುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುರುಕುಂದ ಗ್ರಾಮದ ವಾರ್ಡ್ ನಂಬರ್ ಮೂರರಲ್ಲಿ ಕಳೆದ ಮೂರು ತಿಂಗಳಿಂದ ಚರಂಡಿ ನೀರು ರಸ್ತೆಯ ಮೇಲೆ ಹರಿದು ಗಬ್ಬು ನಾರುತ್ತಿದ್ದರೂ, ಪಂಚಾಯತಿ ಆಡಳಿತ ಸಂಪೂರ್ಣ ನಿರ್ಲಕ್ಷ್ಯ ವಹಿಸಿರುವ ಘಟನೆ ಬೆಳಕಿಗೆ ಬಂದಿದೆ.

​ಗ್ರಾಮದ ಪ್ರಮುಖ ವಾರ್ಡ್‌ನಲ್ಲಿ ಚರಂಡಿಗಳು ಕಸ-ಕಡ್ಡಿಗಳಿಂದ ಸಂಪೂರ್ಣವಾಗಿ ತುಂಬಿ ಹೋಗಿದ್ದು, ಕೊಳಚೆ ನೀರು ಸರಾಗವಾಗಿ ಹರಿದು ಹೋಗಲು ಜಾಗವಿಲ್ಲದೆ ರಸ್ತೆಯ ಮೇಲೆಯೇ ಕೆರೆಯಂತೆ ನಿಲ್ಲುತ್ತಿದೆ. ಸಾರ್ವಜನಿಕರು ಮತ್ತು ಶಾಲಾ ಮಕ್ಕಳು ನಿತ್ಯವೂ ಇದೇ ಗಬ್ಬು ನಾರುವ ಕೊಳಚೆ ನೀರಿನಲ್ಲೇ ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ನರಕಸದೃಶ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.

​”ನನಗೆ ಯಾರು ಏನು ಮಾಡಕ್ಕಾಗಲ್ಲ” ಎಂದ ಪಿಡಿಓ!

ಈ ತೀವ್ರ ಸಮಸ್ಯೆಯ ಕುರಿತು ಗ್ರಾಮಸ್ಥರು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ (PDO) ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಬದಲಿಗೆ, ಕರ್ತವ್ಯದ ಜವಾಬ್ದಾರಿ ಮರೆತು ಮಾತನಾಡಿರುವ ಪಿಡಿಓ ಅವರು, “ನೀವು ಬೇಕಾದರೆ ಎಸಿ (AC) ಅಥವಾ ಡಿಸಿ (DC) ಹತ್ತಿರ ಹೋಗಿ ಕಂಪ್ಲೇಂಟ್ ಮಾಡಿ, ನನಗೆ ಯಾರು ಏನೂ ಮಾಡಕ್ಕಾಗಲ್ಲ” ಎಂದು ಬೇಜವಾಬ್ದಾರಿತನದ ಉಡಾಫೆ ಉತ್ತರ ನೀಡಿದ್ದಾರೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

​”ಕುರುಕುಂದ ಗ್ರಾಮ ಪಂಚಾಯತಿಗೆ ಅಧಿಕಾರಿಗಳು ಬರುವುದೇ ಅಪರೂಪವಾಗಿದೆ. ಇಲ್ಲಿ ಕೇಳುವವರು ಹೇಳುವವರು ಯಾರೂ ಇಲ್ಲದಂತಾಗಿದೆ. ಜನರ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ಅಧಿಕಾರಿಗಳು ಈ ರೀತಿ ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವುದು ಸರಿಯಲ್ಲ. ಈ ಕೂಡಲೇ ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಮತ್ತು ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.”

— ಸಾಬಣ್ಣ ವಗ್ಗರ್, ಸಾಮಾಜಿಕ ಹೋರಾಟಗಾರ

​ಸ್ಥಳೀಯ ನಿವಾಸಿಗಳ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಮೇಲಾಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಚರಂಡಿ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಸಾರ್ವಜನಿಕರ ದೂರಿಗೆ ಕಣ್ಣು ಮುಚ್ಚಿ ಕುಳಿತಿರುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

 


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!