ಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿ

ಚಿತ್ರದುರ್ಗ/ದಾವಣಗೆರೆ ಹೆದ್ದಾರಿಗಳಲ್ಲಿ ಸರಣಿ ದುರಂತ: ಪ್ರತ್ಯೇಕ ಅಪಘಾತಗಳಲ್ಲಿ ಎಂಟು ಮಂದಿ ದುರ್ಮರಣ!

Share News

ಚಿತ್ರದುರ್ಗ/ದಾವಣಗೆರೆ: ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯ ಹೆದ್ದಾರಿಗಳಲ್ಲಿ ಭಾನುವಾರ ರಾತ್ರಿ ಹಾಗೂ ಸೋಮವಾರ ಸಂಭವಿಸಿದ ಐದು ಪ್ರತ್ಯೇಕ ಭೀಕರ ರಸ್ತೆ ಅಪಘಾತಗಳಲ್ಲಿ ಒಟ್ಟು ಎಂಟು ಜನ ಮೃತಪಟ್ಟು, ೨೩ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಧೃತಿಗೆಡಿಸುವ ಘಟನೆಗಳು ವರದಿಯಾಗಿವೆ.

ಮೊಳಕಾಲ್ಮುರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ ೧೫೦ ‘ಎ’ ನ ಕೋನಾಪುರ ಕ್ರಾಸ್ ಬಳಿ ಸೋಮವಾರ ಬೆಳಗಿನ ಜಾವ ಖಾಸಗಿ ಬಸ್ಸೊಂದು ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಬಸ್ಸಿನಲ್ಲಿದ್ದ ೨೩ ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್ ಚಾಲಕ, ಮೊಳಕಾಲ್ಮುರು ತಾಲೂಕಿನ ಸಂತೇಗುಡ್ಡ ಗ್ರಾಮದ ಮಹಮದ್‌ ಯಾಹಿಯಾ (೨೮), ಚಳ್ಳಕೆರೆ ತಾಲೂಕಿನ ಚೌಳೂರು ಗ್ರಾಮದ ಅಜಯ್‌ (೩೨) ಮತ್ತು ಬೆಂಗಳೂರಿನ ಬಿ.ಎಲ್.‌ ನರಸಿಂಹಮೂರ್ತಿ (೪೦) ಮೃತ ದುರ್ದೈವಿಗಳು.

ಹೊಳಲ್ಕೆರೆ ಹೊರವಲಯದ ರಾಷ್ಟ್ರೀಯ ಹೆದ್ದಾರಿ-೧೩ರ ಹನುಮಂತ ದೇವರ ಕಣಿವೆಯಲ್ಲಿ ಲಾರಿ ಹಾಗೂ ಥಾರ್ ಜೀಪ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಜೀಪ್‌ನಲ್ಲಿದ್ದ ಚಿತ್ರದುರ್ಗದ ಮಾರುತಿ ಗ್ಯಾಸ್ ಏಜೆನ್ಸಿ ಮಾಲೀಕ ಪ್ರಭು ಪ್ರಸಾದ್ ಅವರ ಪುತ್ರ ಲೋಹಿತ್ ಪ್ರಸಾದ್ (೩೧) ಹಾಗೂ ಸೊಸೆ ನಿತ್ಯಶ್ರೀ (೨೮) ಸ್ಥಳದಲ್ಲೇ ಅಸುನೀಗಿದ್ದಾರೆ. ದುರದೃಷ್ಟವಶಾತ್ ಇವರಿಗೆ ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು ಎನ್ನಲಾಗಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬೈಕ್‌ಗೆ ಹಠಾತ್ತನೆ ಹಂದಿಗಳು ಅಡ್ಡ ಬಂದಿವೆ. ಈ ವೇಳೆ ಹಂದಿಗಳನ್ನು ತಪ್ಪಿಸಲು ಹೋದ ಬೈಕ್ ಸವಾರ ರಸ್ತೆ ಮೇಲೆ ಬಿದ್ದು ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ಚನ್ನಗಿರಿ ತಾಲೂಕಿನ ಕುಳೇನೂರು ಗ್ರಾಮದ ರಮೇಶ್ (೩೫) ಮೃತಪಟ್ಟ ಸವಾರ.

ಸಂತೇಬೆನ್ನೂರಿನ ಸರ್ಕಾರಿ ಪದವಿ ಕಾಲೇಜು ಬಳಿಯ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಉತ್ತರ ಪ್ರದೇಶ ಮೂಲದ ಬಟ್ಟೆ ವ್ಯಾಪಾರಿ ಮಹಮ್ಮದ್ ಸಿರಾಜ್ (೨೬) ಎಂದು ಗುರುತಿಸಲಾಗಿದೆ.

ದಾವಣಗೆರೆ ಹೊರವಲಯದ ತುಂಗಭದ್ರಾ ಬಡಾವಣೆ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಚಲಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ನಾಲೆಗೆ ಉರುಳಿ ಬಿದ್ದಿದೆ. ಈ ಭೀಕರ ಅಪಘಾತದಲ್ಲಿ ಲಾರಿ ಚಾಲಕ, ಹಾವೇರಿ ಜಿಲ್ಲೆಯ ಹಿರೇಕೆರೂರು ಮೂಲದ ರಮೇಶ್‌ (೬೩) ಎಂಬುವವರು ಸಾವನ್ನಪ್ಪಿದ್ದಾರೆ.

​ಎಲ್ಲಾ ಘಟನಾ ಸ್ಥಳಗಳಿಗೂ ಆಯಾ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

 


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!