Crime Newsಕ್ರೈಂ ಸುದ್ದಿಜಿಲ್ಲಾ ಸುದ್ದಿತಾಲೂಕುರಾಜ್ಯ ಸುದ್ದಿ

ಬೆಳಗಾವಿ: ಕುಂದಾನಗರಿಯಲ್ಲಿ ಮರ್ಯಾದೆಗೇಡು ಹತ್ಯೆ; ಪ್ರಿಯಕರನ ಜೊತೆ ಹೋದ ಮಗಳಿಗೆ ವಿಷವಿಕ್ಕಿ ಕೊಂದ ಪೋಷಕರು!

Share News

ಬೆಳಗಾವಿ: ಪ್ರೀತಿಗಾಗಿ ಹಠ ಹಿಡಿದ ಮಗಳನ್ನು ಹೆತ್ತವರೇ ಸಂಚು ರೂಪಿಸಿ ಹತ್ಯೆ ಮಾಡಿದ ಮನಕಲಕುವ ಘಟನೆಯೊಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನದಿಗುಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮರ್ಯಾದೆಗಾಗಿ ಸ್ವಂತ ಮಗಳನ್ನೇ ಬಲಿಪಡೆದ ಪೋಷಕರು, ಸಾಕ್ಷ್ಯ ನಾಶಪಡಿಸಲು ಯಾರಿಗೂ ತಿಳಿಯದಂತೆ ಶವಸಂಸ್ಕಾರವನ್ನೂ ಮುಗಿಸಿರುವುದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.

ನದಿಗುಡಿ ಗ್ರಾಮದ ಸತ್ಯವ್ವ (24) ಹಾಗೂ ಅದೇ ಗ್ರಾಮದ ಕೃಷ್ಣಾ ಎಂಬ ಯುವಕ ಕಳೆದ ಹತ್ತು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಜಾತಿ ಬೇರೆ ಎಂಬ ಕಾರಣಕ್ಕೆ ಸತ್ಯವ್ವಳ ಪೋಷಕರು ಈ ಪ್ರೀತಿಗೆ ಬದ್ಧ ವಿರೋಧ ವ್ಯಕ್ತಪಡಿಸಿದ್ದರು. ನಾಲ್ಕು ವರ್ಷಗಳ ಹಿಂದೆ ಪೋಷಕರು ಆಕೆಗೆ ಬಲವಂತವಾಗಿ ಬೇರೊಬ್ಬ ವ್ಯಕ್ತಿಯೊಂದಿಗೆ ವಿವಾಹ ಮಾಡಿಕೊಟ್ಟಿದ್ದರು.

​ಪತಿ ಮನೆಯಲ್ಲಿ ಇರಲು ಇಷ್ಟಪಡದ ಸತ್ಯವ್ವ, ಮದುವೆಯಾದ ಕೇವಲ ಎರಡು ತಿಂಗಳಿಗೆ ಗಂಡನ ಮನೆ ಬಿಟ್ಟು ಪ್ರಿಯಕರ ಕೃಷ್ಣಾನೊಂದಿಗೆ ಮಹಾರಾಷ್ಟ್ರಕ್ಕೆ ಪರಾರಿಯಾಗಿದ್ದಳು. ಕೆಲವು ದಿನಗಳಿಂದ ಅಲ್ಲಿಯೇ ವಾಸವಾಗಿದ್ದ ಇವರನ್ನು ಪೋಷಕರು ಪತ್ತೆ ಹಚ್ಚಿ, ಸಂಧಾನ ಮಾಡುವುದಾಗಿ ನಂಬಿಸಿ ಗ್ರಾಮಕ್ಕೆ ಕರೆತಂದಿದ್ದರು.

ಗ್ರಾಮಕ್ಕೆ ಮರಳಿದ ಮೇಲೂ ಸತ್ಯವ್ವ ತನ್ನ ಪ್ರೀತಿಯ ಹಠ ಬಿಡದಿದ್ದಾಗ ಮತ್ತು ಪೋಷಕರು ಸೂಚಿಸಿದ ಮತ್ತೊಂದು ಮದುವೆಗೆ ಒಪ್ಪದಿದ್ದಾಗ ಆಕೆಯ ಮೇಲೆ ದ್ವೇಷ ಸಾಧಿಸಿದ್ದಾರೆ. ಕಳೆದ ಗುರುವಾರ ಮಧ್ಯರಾತ್ರಿ ಸತ್ಯವ್ವಳಿಗೆ ಬಲವಂತವಾಗಿ ವಿಷ ಕುಡಿಸಿ ಹತ್ಯೆ ಮಾಡಿದ್ದಾರೆ. ಅಷ್ಟಕ್ಕೇ ನಿಲ್ಲದ ಕುಟುಂಬಸ್ಥರು, ಪೊಲೀಸರಿಗೆ ಅಥವಾ ಗ್ರಾಮಸ್ಥರಿಗೆ ತಿಳಿಯದಂತೆ ಸ್ಮಶಾನದಲ್ಲಿ ಶವವನ್ನು ಸುಟ್ಟು ಹಾಕುವ ಮೂಲಕ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ.

ತನ್ನ ಪ್ರಿಯತಮೆ ಇದ್ದಕ್ಕಿದ್ದಂತೆ ನಾಪತ್ತೆಯಾದ ಬಗ್ಗೆ ಅನುಮಾನಗೊಂಡ ಕೃಷ್ಣಾ, ಯಮಕನಮರಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರು ಸತ್ಯವ್ವಳ ಕುಟುಂಬಸ್ಥರನ್ನು ವಿಚಾರಣೆಗೆ ಒಳಪಡಿಸಿದಾಗ ಈ ಭೀಕರ ಸತ್ಯ ಹೊರಬಂದಿದೆ.

​ಬಂಧನ: ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯವ್ವಳ ಚಿಕ್ಕಪ್ಪ, ಸಹೋದರ ಮತ್ತು ಭಾವನನ್ನು ಪೊಲೀಸರು ಬಂಧಿಸಿದ್ದಾರೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

​ಹೆತ್ತ ಮಗಳನ್ನೇ ಹಂತಕರಾಗಿ ಕೊಂದ ಈ ಘಟನೆಯು ಸಮಾಜದ ಮರ್ಯಾದೆಗೇಡು ಪರಂಪರೆಯನ್ನು ಮತ್ತೊಮ್ಮೆ ಪ್ರಶ್ನಿಸುವಂತೆ ಮಾಡಿದೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!