ಮಧ್ಯಪ್ರಾಚ್ಯ ಸಂಘರ್ಷಕ್ಕೆ ಇಸ್ಲಾಮಾಬಾದ್ನಲ್ಲಿ ಶಾಂತಿ ಮಾತುಕತೆ: ಇರಾನ್ಗೆ ಟ್ರಂಪ್ ಕಠಿಣ ಎಚ್ಚರಿಕೆ!

ವಾಷಿಂಗ್ಟನ್/ಇಸ್ಲಾಮಾಬಾದ್: ಮಧ್ಯಪ್ರಾಚ್ಯದಲ್ಲಿ ಕಳೆದ ಕೆಲವು ಸಮಯದಿಂದ ಹೊತ್ತಿ ಉರಿಯುತ್ತಿರುವ ಯುದ್ಧದ ಜ್ವಾಲೆಯನ್ನು ನಂದಿಸಲು ಜಾಗತಿಕ ಮಟ್ಟದಲ್ಲಿ ನಿರ್ಣಾಯಕ ಹೆಜ್ಜೆಯನ್ನಿಡಲಾಗಿದೆ. ಈ ಬಿಕ್ಕಟ್ಟು ಶಮನಗೊಳಿಸುವ ಉದ್ದೇಶದಿಂದ ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ಇಂದು ಮಹತ್ವದ ಶಾಂತಿ ಮಾತುಕತೆ ಆಯೋಜನೆಯಾಗಿದ್ದು, ಇಡೀ ವಿಶ್ವದ ಕಣ್ಣು ಈ ಸಭೆಯ ಫಲಿತಾಂಶದತ್ತ ನೆಟ್ಟಿದೆ.
ಶಾಂತಿ ಮಾತುಕತೆ ಆರಂಭವಾಗುವ ಮುನ್ನವೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ಗೆ ನೇರ ಮತ್ತು ಕಠಿಣ ಎಚ್ಚರಿಕೆ ನೀಡಿದ್ದಾರೆ. “ಈ ಮಾತುಕತೆಯಲ್ಲಿ ಶಾಂತಿ ಸೂತ್ರಕ್ಕೆ ಇರಾನ್ ಒಪ್ಪಿಗೆ ಸೂಚಿಸದಿದ್ದರೆ, ಮತ್ತೊಮ್ಮೆ ಭೀಕರ ದಾಳಿಯನ್ನು ಎದುರಿಸಬೇಕಾಗುತ್ತದೆ” ಎಂದು ಅವರು ಎಚ್ಚರಿಸಿದ್ದಾರೆ.
ವಿಶೇಷವೆಂದರೆ, ಇರಾನ್ ವಿಷಯದಲ್ಲಿ ತಮಗೆ ಯಾವುದೇ ‘ಪ್ಲ್ಯಾನ್ ಬಿ’ (Plan B) ಅಗತ್ಯವಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಇರಾನ್ನ ಸೇನಾ ಸಾಮರ್ಥ್ಯ ಈಗಾಗಲೇ ಕ್ಷೀಣಿಸಿದ್ದು, ಚರ್ಚೆ ವಿಫಲವಾದರೆ ಅಮೆರಿಕ ಮುಂದಿನ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ ಎಂದು ಅವರು ಹೇಳಿದ್ದಾರೆ.
ವಿಶ್ವದ ತೈಲ ಸಾಗಣೆಯ ಜೀವನಾಡಿ ಎನಿಸಿಕೊಂಡಿರುವ ಹಾರ್ಮುಜ್ ಜಲಸಂಧಿಯ ಬಗ್ಗೆಯೂ ಟ್ರಂಪ್ ಮಾತನಾಡಿದ್ದಾರೆ. ಈ ಜಲಸಂಧಿಯು ಶೀಘ್ರದಲ್ಲೇ ತನ್ನಿಂದ ತಾನಾಗಿಯೇ ಸಂಚಾರಕ್ಕೆ ಮುಕ್ತವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಇರಾನ್ ಜೊತೆಗೆ ಇನ್ನು ಸುದೀರ್ಘ ಚರ್ಚೆ ನಡೆಸುವ ಅಗತ್ಯವಿಲ್ಲ, ಈಗ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಸ್ಲಾಮಾಬಾದ್ನಲ್ಲಿ ನಡೆಯಲಿರುವ ಈ ಶಾಂತಿ ಪ್ರಕ್ರಿಯೆಯಲ್ಲಿ ಇರಾನ್ ಪರವಾಗಿ ಆ ದೇಶದ ಸಂಸತ್ ಸ್ಪೀಕರ್ ಮೊಹಮ್ಮದ್ ಬಾಘರ್ ಖ್ವಾಲಿಬಾಫ್ ನೇತೃತ್ವ ವಹಿಸುತ್ತಿದ್ದಾರೆ. ಸಂಘರ್ಷದ ತೀವ್ರತೆಯನ್ನು ಕಡಿಮೆ ಮಾಡಿ, ಪ್ರದೇಶದಲ್ಲಿ ಸ್ಥಿರತೆ ತರುವ ನಿಟ್ಟಿನಲ್ಲಿ ಖ್ವಾಲಿಬಾಫ್ ಅವರ ನಡೆ ಅತ್ಯಂತ ಕುತೂಹಲ ಮೂಡಿಸಿದೆ.
ನಿರೀಕ್ಷೆಗಳು:
ಇಸ್ಲಾಮಾಬಾದ್ನ ಈ ಸಭೆಯು ಯುದ್ಧದ ಕಾರ್ಮೋಡವನ್ನು ಸರಿಸುವಲ್ಲಿ ಯಶಸ್ವಿಯಾಗುತ್ತದೆಯೇ? ಅಥವಾ ಅಮೆರಿಕದ ಎಚ್ಚರಿಕೆಯಂತೆ ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳುತ್ತದೆಯೇ? ಎಂಬುದನ್ನು ಇಂದಿನ ಸಂಧಾನ ಸಭೆಯ ನಂತರ ತಿಳಿಯಲಿದೆ.



