ಬೆಂಗಳೂರು: ಪ್ರೇಮ ವೈಫಲ್ಯಕ್ಕೆ ಯುವಕ ಬಲಿ; ಮದುವೆ ನಿರಾಕರಣೆಗೆ ಮನನೊಂದು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ

ಬೆಂಗಳೂರು: ಕಾಲೇಜು ದಿನಗಳಿಂದ ಪ್ರೀತಿಸುತ್ತಿದ್ದ ಯುವತಿ ಪೋಷಕರ ಒತ್ತಾಯಕ್ಕೆ ಮದುವೆಯನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ, ಮನನೊಂದ ಯುವಕನೊಬ್ಬ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಿಕಾಂ ಪದವೀಧರನಾಗಿದ್ದ ಅಭಿಷೇಕ್ (23) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಅಭಿಷೇಕ್ ಕಳೆದ ಆರು-ಏಳು ವರ್ಷಗಳಿಂದ ಖಾಸಗಿ ಕಾಲೇಜಿನಲ್ಲಿ ತನ್ನ ಸಹಪಾಠಿಯಾಗಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇಬ್ಬರ ಪ್ರೀತಿಯ ವಿಚಾರ ಯುವತಿಯ ಮನೆಯವರಿಗೂ ತಿಳಿದಿತ್ತು.
ಆದರೆ, ಯುವತಿಯ ಪೋಷಕರು ಅಭಿಷೇಕ್ ಜೊತೆಗಿನ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಪೋಷಕರ ಮಾತಿಗೆ ಕಟ್ಟುಬಿದ್ದ ಯುವತಿಯು ಕಳೆದ ಕೆಲವು ದಿನಗಳಿಂದ ಅಭಿಷೇಕ್ನನ್ನು ಮಾತನಾಡಿಸದೆ ದೂರವಿಡಲು (Avoid) ಪ್ರಾರಂಭಿಸಿದ್ದಾಳೆ ಎಂದು ತಿಳಿದುಬಂದಿದೆ. ಇದರಿಂದ ತೀವ್ರ ಖಿನ್ನತೆಗೊಳಗಾದ ಅಭಿಷೇಕ್, ಯುವತಿ ತನ್ನನ್ನು ಮದುವೆಯಾಗಲು ಒಪ್ಪುತ್ತಿಲ್ಲ ಎಂಬ ಕಾರಣಕ್ಕೆ ಸಾವಿನ ಹಾದಿ ಹಿಡಿದಿದ್ದಾನೆ.
ಆತ್ಮಹತ್ಯೆಗೂ ಮುನ್ನ ಅಭಿಷೇಕ್ ಡೆತ್ನೋಟ್ ಬರೆದಿಟ್ಟಿದ್ದು, ಅದರಲ್ಲಿ ತನ್ನ ಪ್ರೇಮ ವೈಫಲ್ಯ ಹಾಗೂ ಯುವತಿಯ ಮದುವೆ ನಿರಾಕರಣೆಯ ಕುರಿತು ನೋವನ್ನು ತೋಡಿಕೊಂಡಿದ್ದಾನೆ ಎನ್ನಲಾಗಿದೆ. ವಿಷಯ ತಿಳಿದ ಯಲಹಂಕ ನ್ಯೂಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಡೆತ್ನೋಟ್ ವಶಪಡಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಪ್ರೀತಿ-ಪ್ರೇಮದ ವಿಚಾರದಲ್ಲಿ ಆತುರದ ನಿರ್ಧಾರ ಕೈಗೊಂಡು ಯುವಕನೊಬ್ಬ ಪ್ರಾಣ ಕಳೆದುಕೊಂಡಿರುವುದು ಪೋಷಕರ ಆಕ್ರಂದನಕ್ಕೆ ಕಾರಣವಾಗಿದೆ.



