Crime Newsಕ್ರೈಂ ಸುದ್ದಿಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುರಾಜ್ಯ ಸುದ್ದಿ

ಅಪರಾಧ ಚಟುವಟಿಕೆಗಳಿಗೆ ಬ್ರೇಕ್: ಮುರ್ಡೇಶ್ವರದ ಐವರು ರೌಡಿಶೀಟರ್‌ಗಳು ಜಿಲ್ಲೆಯಿಂದ ಗಡಿಪಾರು

Share News

ಭಟ್ಕಳ: ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸತತ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಐವರು ರೌಡಿಶೀಟರ್‌ಗಳನ್ನು ಆರು ತಿಂಗಳ ಅವಧಿಗೆ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.

​ಮುರ್ಡೇಶ್ವರದ ಭಾಸ್ಕರ್ ಮಹಾದೇವ ನಾಯ್ಕ್ (40), ರಾಜು ಮಹಾದೇವ ನಾಯ್ಕ್ (36), ಕೇಶವ ಅಲಿಯಾಸ್ ಕೀರ್ತಿಕ್ ಮಹಾದೇವ ನಾಯ್ಕ್ (27), ಬೈಲೂರು ನಿವಾಸಿ ಗಣೇಶ್ ಬಾಬು ನಾಯ್ಕ್ (25) ಹಾಗೂ ಗಣೇಶ್ ಅಲಿಯಾಸ್ ಚಕ್ಲಿ ಜಯಂತ್ ನಾಯ್ಕ್ (23) ಗಡಿಪಾರಾದ ಆರೋಪಿಗಳಾಗಿದ್ದಾರೆ.

ಈ ಐವರು ಆರೋಪಿಗಳ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಇವರನ್ನು ರೌಡಿಪಟ್ಟಿಗೆ ಸೇರಿಸಿ ನಿರಂತರ ನಿಗಾ ಇರಿಸಲಾಗಿತ್ತು. ಆದರೂ ಇವರು ತಮ್ಮ ಹಳೆ ಚಟುವಟಿಕೆಗಳನ್ನು ಮುಂದುವರಿಸಿದ್ದರಿಂದ, ಸಾರ್ವಜನಿಕರಿಗೆ ತೊಂದರೆಯಾಗದಂತೆ ತಡೆಯಲು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವರದಿಯ ಮೇರೆಗೆ ಭಟ್ಕಳ ಉಪವಿಭಾಗಾಧಿಕಾರಿಗಳು ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 55 (ಎ) ಮತ್ತು (ಬಿ) ಅಡಿಯಲ್ಲಿ ಈ ಆದೇಶ ಹೊರಡಿಸಿದ್ದಾರೆ.

ಮುರ್ಡೇಶ್ವರ ಪೊಲೀಸರು ಏಪ್ರಿಲ್ 5 ಮತ್ತು 6 ರಂದು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಇಂತಹ ಕಠಿಣ ಕ್ರಮಗಳು ಮುಂದುವರಿಯಲಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!