ಜಿಲ್ಲಾ ಸುದ್ದಿತಾಲೂಕುರಾಜ್ಯ ಸುದ್ದಿಸ್ಥಳೀಯ ಸುದ್ದಿಗಳು

ದುಷ್ಟಸಂಹಾರ ವೀರಾಂಜನೇಯ ಸ್ವಾಮಿ ರಥೋತ್ಸವಕ್ಕೆ ಹರಿದು ಬಂದ ಜನಸ್ತೋಮ

Share News

ಚಿಕ್ಕಬಳ್ಳಾಪುರ :ಜಿಲ್ಲೆಯ ಚಿಂತಾಮಣಿ ನಗರಕ್ಕೆ ಪಶ್ಚಿಮಭಿಮುಖವಾಗಿರುವ ಅತಿ ಎತ್ತರ ಅಂಬಾಜಿದುರ್ಗಾ ಬೆಟ್ಟದ ಮೇಲೆ ನೆಲೆಸಿರುವ ದುಷ್ಟಸಂಹಾರ ವೀರಾಂಜನೇಯ ಸ್ವಾಮಿಯ ದೇವಾಲಯದಲ್ಲಿ ಪ್ರಥಮ ಬಾರಿಗೆ ನಡೆದ ಸೀತಾರಾಮ ಕಲ್ಯಾಣೋತ್ಸವ ಹಾಗೂ ರಥೋತ್ಸವಕ್ಕೆ ಜನ ಸಮೂಹವೇ ಹರಿದು ಬಂದಿತ್ತು.

ಸಾವಿರಾರು ವರ್ಷಗಳ ಹಿಂದೆ ಅಂಬಾಜಿ ಕುಂಬಾಜಿ ಎಂಬ ಸಾಮಂತ ಅರಸರು ಆಳ್ವಿಕೆ ಮಾಡುವ ಸಂದರ್ಭದಲ್ಲಿ ಕ್ಷೇತ್ರ ಪಾಲಕರಾಗಿ ಅಂಜನೇಯಸ್ವಾಮಿ ಸರಿಸುಮಾರು 1500 ಅಡಿ ಎತ್ತರದ ಬೆಟ್ಟದಲ್ಲಿ ಅಂಬಾಜಿದುರ್ಗದಲ್ಲಿ ಶ್ರೀರಾಮ ಬ್ರಹ್ಮರಥೋತ್ಸವ ಸಂಭ್ರಮ ಅದ್ದೂರಿಯಾಗಿ ನಡೆಯಿತು.

ಚಿಕ್ಕಬಳ್ಳಾಪುರ ಜಿಲ್ಲೆಯ ಇತಿಹಾಸದಲ್ಲೇ ಇದು ಹೊಸ ದಾಖಲೆ ..! ಪ್ರಕೃತಿಯ ಮಡಿಲಲ್ಲಿರುವ 1500 ಅಡಿ ಎತ್ತರದ ಬೆಟ್ಟದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಭವ್ಯ ಬ್ರಹ್ಮರಥೋತ್ಸವ ಜರುಗಿದೆ. ದುಷ್ಟ ಸಂಹಾರಕ ವೀರಾಂಜನೇಯ ಹಾಗೂ ಅಂಬೂಜೇಶ್ವರನ ಸನ್ನಿಧಿಯಲ್ಲಿ ನಡೆದ ಈ ಸೀತಾರಾಮ ಕಲ್ಯಾಣ ಹಾಗೂ ರಥೋತ್ಸವದ ಭಕ್ತಿ ವೈಭವದ ಸಾವಿರಾರು ಭಕ್ತರ ಜಯಘೋಷಗಳ ನಡುವೆ ರಾಮ-ಲಕ್ಷ್ಮಣ-ಸೀತೆಯ ರಥವು ಬೆಟ್ಟದ ಮೇಲೆ ಸಾಗಿಬಂದ ದೃಶ್ಯ ನೋಡುಗರ ಕಣ್ಣು ಮನ ತಣಿಸುವಂತಿತ್ತು.

ಚಿಂತಾಮಣಿ ತಾಲ್ಲೂಕಿನ ಪ್ರಸಿದ್ಧ ಅಂಬಾಜಿದುರ್ಗ ಬೆಟ್ಟ ಈಗ ಅಯೋಧ್ಯೆಯಂತೆ ಕಂಗೊಳಿಸುತ್ತಿದೆ. ಚೈತ್ರ ಮಾಸದ ಶುಭ ಘಳಿಗೆಯಲ್ಲಿ, ಸುಂದರ ಶಿಖರಗಳ ನಡುವೆ ನೆಲೆಸಿರುವ ಈ ಬೆಟ್ಟದ ಮೇಲೆ ಜಿಲ್ಲೆಯಲ್ಲೇ ಮೊಟ್ಟಮೊದಲ ಬಾರಿಗೆ 1500 ಅಡಿ ಎತ್ತರದ ಶಿಖರದಲ್ಲಿ ಶ್ರೀರಾಮನ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನೆರವೇರಿತು.

ದುಷ್ಟ ಸಂಹಾರಕ, ಕೋರೆಹಲ್ಲಿನ ವೀರಾಂಜನೇಯ ಸ್ವಾಮಿ ಮತ್ತು ಅಂಬೂಜೇಶ್ವರನ ಪವಿತ್ರ ಸನ್ನಿಧಿಯಲ್ಲಿ ಶ್ರೀರಾಮನ ವೈಭೋಗ ಮುಗಿಲು ಮುಟ್ಟಿತ್ತು. ವಿಶೇಷ ಹೂವಿನ ಅಲಂಕಾರದೊಂದಿಗೆ ನಡೆದ ಸೀತಾರಾಮ ಕಲ್ಯಾಣೋತ್ಸವ ಹಾಗೂ ಲೋಕ ಕಲ್ಯಾಣಕ್ಕಾಗಿ ನಡೆದ ಹೋಮ-ಹವನಗಳು ಭಕ್ತರಲ್ಲಿ ಆಧ್ಯಾತ್ಮಿಕ ಸಂಚಲನ ಮೂಡಿಸಿದವು. ಈ ಬೆಟ್ಟದ ಅಂಕುಡೊಂಕಾದ, ಕಡಿದಾದ ರಸ್ತೆಯಿದ್ದರೂ ಲೆಕ್ಕಿಸದ ಭಕ್ತ ಸಾಗರವು ಭಕ್ತಿಪರವಶತೆಯಿಂದ ಬೆಟ್ಟ ಏರಿಬಂದು ಸ್ವಾಮಿಯ ದರ್ಶನ ಪಡೆದರು.

ರಾಜ್ಯದ ಮೂಲೆ ಮೂಲೆಗಳಿಂದ ಹರಿದುಬಂದ ಭಕ್ತರಿಗಾಗಿ ಇಲ್ಲಿ ಸಕಲ ವ್ಯವಸ್ಥೆ ಮಾಡಲಾಗಿತ್ತು. ಸುಡುಬಿಸಿಲನ್ನು ತಣಿಸಲು ಪಾನಕ, ಮಜ್ಜಿಗೆಯ ವಿತರಣೆ ಹಾಗೂ ಬಂದಂತಹ ಎಲ್ಲಾ ಭಕ್ತಾಧಿಗಳಿಗೂ ಅದ್ದೂರಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಪ್ರಕೃತಿಯ ಸೌಂದರ್ಯದ ನಡುವೆ ನಡೆದ ಈ ಮೊಟ್ಟಮೊದಲ ಬ್ರಹ್ಮರಥೋತ್ಸವವು ಅಂಬಾಜಿದುರ್ಗದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಘಟನೆಯಾಗಿದೆ.ಇನ್ನೂ ಬೆಟ್ಟದ ಮೇಲೆ ಪಂಡ್ರಾಪುರಿ ಭಜನೆ ನೃತ್ಯ ಸೇರಿದಂತೆ ಹಲವಾರು ಸಂಸ್ಕೃತಿಕ ಕಾರ್ಯಕ್ರಮಗಳನ್ನು ಭಕ್ತಾಧಿಗಳು ಕಣ್ಣು ತುಂಬಿಕೊಂಡರು.

ಅಂಬಾಜಿದುರ್ಗದ ವೀರಾಂಜನೇಯನ ಸನ್ನಿಧಿಯಲ್ಲಿ ನಡೆದ ಶ್ರೀರಾಮನ ಈ ರಥೋತ್ಸವ ಭಕ್ತರ ಪಾಲಿಗೆ ಒಂದು ಅವಿಸ್ಮರಣೀಯ ಕ್ಷಣವಾಗಿ ಮಾರ್ಪಟ್ಟಿದೆ. ಹನುಮನ ಭಕ್ತಿಗೆ ರಾಮಚಂದ್ರ ಪ್ರಸನ್ನನಾದ ಈ ಕ್ಷಣಗಳು ಜಿಲ್ಲೆಯ ಜನಮಾನಸದಲ್ಲಿ ಸದಾ ಹಸಿರಾಗಿರಲಿವೆ.

ವರದಿ:ಕೆ.ಮುಟ್ಟಕದಹಳ್ಳಿ ವೆಂಕಟಾಚಲಪತಿ ಪೊಲೀಸ್ ವಾರ್ತೆ ಚಿಕ್ಕಬಳ್ಳಾಪುರ


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!