Crime Newsಕ್ರೈಂ ಸುದ್ದಿಜಿಲ್ಲಾ ಸುದ್ದಿರಾಜ್ಯ ಸುದ್ದಿ

ತುಮಕೂರು: ತಮ್ಮನನ್ನೇ ಕೊಂದ ಅಣ್ಣ, ಸಾಥ್ ನೀಡಿದ ತಂದೆ! ಅಕ್ರಮ ಸಂಬಂಧದ ಶಂಕೆ ಬೆನ್ನಲ್ಲೇ ಬಂಧನ

Share News

ತುಮಕೂರು: ಕ್ಷುಲ್ಲಕ ಕಾರಣಕ್ಕೆ ಶುರುವಾದ ಕೌಟುಂಬಿಕ ಕಲಹವೊಂದು ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತುಮಕೂರು ನಗರದಲ್ಲಿ ಬೆಳಕಿಗೆ ಬಂದಿದೆ. ಸ್ವಂತ ತಮ್ಮನನ್ನೇ ಕೊಲೆ ಮಾಡಿದ ಅಣ್ಣ ಹಾಗೂ ಈ ಕೃತ್ಯಕ್ಕೆ ಸಹಕರಿಸಿದ ತಂದೆಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

ನಗರದ ಬನಶಂಕರಿ ಬಡಾವಣೆಯ ನಿವಾಸಿ ಸ್ಟಾಲಿನ್ (29) ಕೊಲೆಯಾದ ದುರ್ದೈವಿ. ಮಾರ್ಚ್ 22 ರಂದು ಮನೆಯಲ್ಲಿ ನಡೆದ ಗಲಾಟೆಯ ಸಂದರ್ಭದಲ್ಲಿ ಅಣ್ಣ ನವೀನ್ ಹಾಗೂ ತಂದೆ ಜಾನ್ ಪಾಲ್ ಸೇರಿ ಸ್ಟಾಲಿನ್ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದರು ಎನ್ನಲಾಗಿದೆ.

ಕೊಲೆ ಕೃತ್ಯ ಎಸಗಿದ ಬಳಿಕ ಪ್ರಕರಣವನ್ನು ಮುಚ್ಚಿಹಾಕಲು ಆರೋಪಿಗಳು ಹರಸಾಹಸ ಪಟ್ಟಿದ್ದರು. ಸ್ಟಾಲಿನ್ ಮನೆಯಲ್ಲಿ ಆಕಸ್ಮಿಕವಾಗಿ ಕುಸಿದು ಬಿದ್ದಿದ್ದಾನೆ ಎಂದು ಸುಳ್ಳು ಹೇಳಿ ನಗರದ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಐದು ದಿನಗಳ ನಂತರ ಸ್ಟಾಲಿನ್ ಮೃತಪಟ್ಟಿದ್ದಾನೆ. ಮೃತದೇಹ ಹಸ್ತಾಂತರಿಸುವ ಮುನ್ನ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದಾಗ ಅಸಲಿ ಸತ್ಯ ಹೊರಬರಲು ಶುರುವಾಗಿದೆ.

ಮೃತ ಸ್ಟಾಲಿನ್ ದೇಹದ ಮೇಲೆ ಚಾಕುವಿನಿಂದ ಇರಿದ ಗುರುತುಗಳನ್ನು ಕಂಡು ಪೊಲೀಸರಿಗೆ ಅನುಮಾನ ಮೂಡಿತ್ತು. ಈ ವೇಳೆ ಅಣ್ಣ ಮತ್ತು ತಂದೆ ಶವಪರೀಕ್ಷೆ ನಡೆಸದಂತೆ ಪಟ್ಟು ಹಿಡಿದಿದ್ದು ಪೊಲೀಸರ ಅನುಮಾನವನ್ನು ಮತ್ತಷ್ಟು ಬಲಪಡಿಸಿತು. ಅಂತಿಮವಾಗಿ ಶವಪರೀಕ್ಷೆಯ ವರದಿಯಲ್ಲಿ ಇದು ವ್ಯವಸ್ಥಿತ ಕೊಲೆ ಎಂಬುದು ದೃಢಪಟ್ಟಿದೆ.

ಪೊಲೀಸ್ ವಿಚಾರಣೆ ವೇಳೆ ಬೆಚ್ಚಿಬೀಳಿಸುವ ಮಾಹಿತಿ ಲಭ್ಯವಾಗಿದೆ. ಅಣ್ಣ ನವೀನ್ ಮದುವೆಯಾಗಿದ್ದು, ಆತನ ಪತ್ನಿ ಗರ್ಭಿಣಿಯಾಗಿದ್ದರು. ಇತ್ತ ಸ್ಟಾಲಿನ್‌ಗೆ ಜನಿಫರ್ ಎಂಬುವವರ ಜೊತೆ ವಿವಾಹ ನಿಶ್ಚಯವಾಗಿತ್ತು. ಆದರೆ, ಸ್ಟಾಲಿನ್ ಮತ್ತು ಆತನ ಅತ್ತಿಗೆಯ (ನವೀನ್ ಪತ್ನಿ) ನಡುವೆ ಅಕ್ರಮ ಸಂಬಂಧವಿದೆ ಎಂದು ಜನಿಫರ್ ಆರೋಪಿಸಿದ್ದರು. ಇದೇ ವಿಷಯವಾಗಿ ಕಳೆದ ಒಂದು ವಾರದಿಂದ ಮನೆಯಲ್ಲಿ ತೀವ್ರ ಗಲಾಟೆ ನಡೆಯುತ್ತಿತ್ತು. ಈ ಗಲಾಟೆಯ ಉತ್ತುಂಗದಲ್ಲಿ ಅಣ್ಣ ನವೀನ್, ತಂದೆಯ ಸಹಾಯದೊಂದಿಗೆ ತಮ್ಮನನ್ನೇ ಮುಗಿಸಿದ್ದಾನೆ ಎಂದು ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನವೀನ್ ಮತ್ತು ಜಾನ್ ಪಾಲ್ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!