Crime Newsಕ್ರೈಂ ಸುದ್ದಿಜಿಲ್ಲಾ ಸುದ್ದಿತಾಲೂಕುರಾಜ್ಯ ಸುದ್ದಿ

ಮಾಹಿತಿ ನೀಡಲು ವಿಳಂಬ: ತುಮಕೂರು ಗ್ರಾಮಾಂತರ ತಹಸೀಲ್ದಾರ್‌ಗೆ 25 ಸಾವಿರ ರೂ. ದಂಡ

Share News

ತುಮಕೂರು: ಮಾಹಿತಿ ಹಕ್ಕು ಕಾಯ್ದೆಯಡಿ (RTI) ಕೋರಲಾದ ದಾಖಲೆಗಳನ್ನು ನೀಡುವಲ್ಲಿ ನಿರ್ಲಕ್ಷ್ಯ ತೋರಿದ ಮತ್ತು ಆಯೋಗದ ವಿಚಾರಣೆಗೆ ಗೈರುಹಾಜರಾದ ತುಮಕೂರು ಗ್ರಾಮಾಂತರ ತಹಸೀಲ್ದಾರ್ ರಾಜೇಶ್ವರಿ ಅವರಿಗೆ ಕರ್ನಾಟಕ ಮಾಹಿತಿ ಆಯೋಗವು 25,000 ರೂಪಾಯಿ ಭಾರಿ ದಂಡ ವಿಧಿಸಿದೆ.

ನಗರದ ಶಿರಾಗೇಟ್‌ನ ಮರಳೇನಹಳ್ಳಿ ನಿವಾಸಿ ಸೋಮಶೇಖರ್ ಎಂಬುವವರು ವಂಶವೃಕ್ಷ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ದಾಖಲೆಗಳನ್ನು ಕೋರಿ ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ನಿಯಮಾನುಸಾರ ನಿಗದಿತ ಅವಧಿಯಲ್ಲಿ ಮಾಹಿತಿ ನೀಡಲು ಕಚೇರಿ ವಿಫಲವಾಗಿತ್ತು. ಇದರಿಂದ ಬೇಸತ್ತ ಸೋಮಶೇಖರ್ ಅವರು ಮೇಲ್ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಅಂತಿಮವಾಗಿ ಅರ್ಜಿದಾರರು ಕರ್ನಾಟಕ ಮಾಹಿತಿ ಆಯೋಗದ ಮೊರೆ ಹೋಗಿದ್ದರು. ಆಯೋಗವು ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ನೋಟಿಸ್ ನೀಡಿದರೂ, ತಹಸೀಲ್ದಾರ್ ರಾಜೇಶ್ವರಿ ಅವರು ವಿಚಾರಣೆಗೆ ಗೈರುಹಾಜರಾಗಿದ್ದರು ಮತ್ತು ಯಾವುದೇ ಲಿಖಿತ ಪ್ರತಿಕ್ರಿಯೆ ನೀಡಿರಲಿಲ್ಲ. ಈ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಮಾಹಿತಿ ಆಯೋಗವು ದಂಡದ ಆದೇಶ ಹೊರಡಿಸಿದೆ.

ವಿಧಿಸಲಾದ 25,000 ರೂಪಾಯಿ ದಂಡದ ಮೊತ್ತವನ್ನು ತಹಸೀಲ್ದಾರ್ ಅವರ ಸಂಬಳದಿಂದ ಕಡಿತಗೊಳಿಸಿ ಸರ್ಕಾರದ ಖಜಾನೆಗೆ ಜಮೆ ಮಾಡುವಂತೆ ಆಯೋಗವು ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಿದೆ. ಅಲ್ಲದೆ, ಅರ್ಜಿದಾರರು ಕೋರಿರುವ ಮಾಹಿತಿಯನ್ನು ತಕ್ಷಣವೇ ಒದಗಿಸಿ, ಪ್ರಕರಣವನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡುವಲ್ಲಿ ತೋರುವ ಬೇಜವಾಬ್ದಾರಿತನಕ್ಕೆ ಈ ದಂಡದ ಆದೇಶವು ಒಂದು ಎಚ್ಚರಿಕೆಯ ಗಂಟೆಯಾಗಿದೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!