Crime Newsಕ್ರೈಂ ಸುದ್ದಿಜಿಲ್ಲಾ ಸುದ್ದಿತಾಲೂಕುರಾಜ್ಯ ಸುದ್ದಿ

ಯಾದಗಿರಿ: ಜಮೀನಿನ ಹಾದಿ ಸಂಘರ್ಷಕ್ಕೆ ಓರ್ವ ಬಲಿ; ಕುಟುಂಬದ ಸದಸ್ಯರಿಂದಲೇ ಕಲ್ಲು ಎತ್ತಿ ಹಾಕಿ ಯುವಕನ ಹತ್ಯೆ

Share News

ಯಾದಗಿರಿ: ಜಮೀನಿನ ದಾರಿಯ ವಿಚಾರವಾಗಿ ಒಂದೇ ಕುಟುಂಬದ ಸದಸ್ಯರ ನಡುವೆ ನಡೆದ ಕ್ಷುಲ್ಲಕ ಜಗಳವು ವಿಕೋಪಕ್ಕೆ ತಿರುಗಿ, ಯುವಕನೋರ್ವನ ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸುರಪುರ ತಾಲೂಕಿನ ಮಾವಿನಮಟ್ಟಿ ಗ್ರಾಮದಲ್ಲಿ ಸಂಭವಿಸಿದೆ.

ಮೃತ ದುರ್ದೈವಿಯನ್ನು ಪರಮೇಶಿ ಮಲ್ಲಣ್ಣ ಗಿಂಡಿ (27) ಎಂದು ಗುರುತಿಸಲಾಗಿದೆ. ಈ ಗಲಾಟೆಯಲ್ಲಿ ಪರಮೇಶಿ ಅವರ ತಮ್ಮನಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬದ ಸದಸ್ಯರ ನಡುವೆಯೇ ಜಮೀನಿಗೆ ಹೋಗುವ ದಾರಿಯ ವಿಷಯವಾಗಿ ಕಳೆದ ಕೆಲವು ದಿನಗಳಿಂದ ವೈಷಮ್ಯ ಮನೆ ಮಾಡಿತ್ತು ಎನ್ನಲಾಗಿದೆ.

ಜಮೀನಿನ ದಾರಿಯ ವಿಚಾರವಾಗಿ ಮತ್ತೆ ಕಿರಿಕ್ ಶುರುವಾಗಿದ್ದು, ಮಾತಿಗೆ ಮಾತು ಬೆಳೆದು ಕುಟುಂಬದ ಸದಸ್ಯರು ಪರಮೇಶಿ ಅವರ ಮೇಲೆ ಮುಗಿಬಿದ್ದಿದ್ದಾರೆ. ಈ ವೇಳೆ ಪರಮೇಶಿ ಅವರ ತಲೆಯ ಮೇಲೆ ಭಾರೀ ಗಾತ್ರದ ಕಲ್ಲನ್ನು ಎತ್ತಿ ಹಾಕಲಾಗಿದ್ದು, ಅವರು ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದಿದ್ದಾರೆ. ತಡೆಯಲು ಬಂದ ತಮ್ಮನ ಮೇಲೆಯೂ ಹಲ್ಲೆ ನಡೆಸಲಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಕೆಂಭಾವಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

​ಈ ಸಂಬಂಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಸ್ವಂತ ಕುಟುಂಬದ ಸದಸ್ಯರೇ ಸೇರಿ ಯುವಕನನ್ನು ಹತ್ಯೆ ಮಾಡಿರುವುದು ಗ್ರಾಮದಲ್ಲಿ ತೀವ್ರ ಆತಂಕ ಮತ್ತು ವಿಷಾದಕ್ಕೆ ಕಾರಣವಾಗಿದೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!