ಬೀದರ್: ಹೈದರಾಬಾದ್-ಮುಂಬೈ ಹೆದ್ದಾರಿಯಲ್ಲಿ ಭರ್ಜರಿ ಕಾರ್ಯಾಚರಣೆ; 41.83 ಲಕ್ಷ ಮೌಲ್ಯದ ಗಾಂಜಾ ವಶ

ಬೀದರ್: ಜಿಲ್ಲೆಯ ಮನ್ನಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಸಾಗಿಸಲು ಸಂಗ್ರಹಿಸಿಟ್ಟಿದ್ದ ಸುಮಾರು 83 ಕೆ.ಜಿ 670 ಗ್ರಾಂ ತೂಕದ ಗಾಂಜಾವನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ದಿನಾಂಕ 25/03/2026 ರಂದು ನಸುಕಿನ ಜಾವ 1:00 ಗಂಟೆ ಸುಮಾರಿಗೆ, ಹೈದರಾಬಾದ್-ಮುಂಬೈ ಹೆದ್ದಾರಿಯ ಭಂಗೂರ ಗ್ರಾಮದ ಬಳಿ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ಗಾಂಜಾ ಸಾಗಿಸಲು ವಾಹನಕ್ಕಾಗಿ ಕಾಯುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮನ್ನಳ್ಳಿ ಪಿಎಸ್ಐ ಶ್ರೀಮತಿ ನಂದಿನಿ ಅವರಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ದಾಳಿ ನಡೆಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಪ್ರದೀಪ್ ಗುಂಟಿ ಐಪಿಎಸ್, ಹೆಚ್ಚುವರಿ ಎಸ್ಪಿ ಶ್ರೀ ಚಂದ್ರಕಾಂತ ಪೂಜಾರಿ ಹಾಗೂ ಬೀದರ್ ಡಿವೈಎಸ್ಪಿ ಶ್ರೀ ದೂದ ಪೀರ್ ಹುಸೇನಸಾಬ ಮುಲ್ಲಾ ಅವರ ಮಾರ್ಗದರ್ಶನದಲ್ಲಿ, ಗ್ರಾಮೀಣ ವೃತ್ತ ನಿರೀಕ್ಷಕ ಶ್ರೀ ಗುರುಪಾದ ಎಸ್. ಬಿರಾದಾರ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಯಿತು. ತಹಶೀಲ್ದಾರ್ ಶ್ರೀ ರವೀಂದ್ರ ದಾಮಾ ಅವರ ಸಮ್ಮುಖದಲ್ಲಿ ನಸುಕಿನ 3:15ಕ್ಕೆ ಭಂಗೂರ ಓವರ್ಬ್ರಿಡ್ಜ್ ಬಳಿ ದಾಳಿ ನಡೆಸಲಾಯಿತು.
ಪೊಲೀಸರನ್ನು ಕಂಡು ಒಬ್ಬ ಆರೋಪಿ ಕತ್ತಲಲ್ಲಿ ಪರಾರಿಯಾಗಿದ್ದು, ಮತ್ತೊಬ್ಬನನ್ನು ಸುತ್ತುವರಿದು ಬಂಧಿಸಲಾಗಿದೆ. ಬಂಧಿತನ ವಶದಲ್ಲಿದ್ದ 4 ಚೀಲಗಳನ್ನು ಪರಿಶೀಲಿಸಿದಾಗ ಪ್ಲಾಸ್ಟಿಕ್ ಟೇಪ್ನಿಂದ ಪ್ಯಾಕ್ ಮಾಡಲಾಗಿದ್ದ 42 ಗಾಂಜಾ ಪ್ಯಾಕೆಟ್ಗಳು ಪತ್ತೆಯಾಗಿವೆ.
ಗಾಂಜಾ ತೂಕ: 83 ಕೆ.ಜಿ 670 ಗ್ರಾಂ
ಅಂದಾಜು ಮೌಲ್ಯ: ₹41,83,500/- (ನಲವತ್ತೊಂದು ಲಕ್ಷದ ಎಂಬತ್ಮೂರು ಸಾವಿರದ ಐನೂರು ರೂಪಾಯಿ)
ವಿಚಾರಣೆಯ ವೇಳೆ ಆರೋಪಿಗಳು ಈ ಗಾಂಜಾವನ್ನು ಒರಿಸ್ಸಾ ಮತ್ತು ಆಂಧ್ರಪ್ರದೇಶದ ಗಡಿ ಭಾಗದ ಕಾಳಸಂತೆಯಲ್ಲಿ ಖರೀದಿಸಿ, ಹೆಚ್ಚಿನ ಲಾಭಕ್ಕಾಗಿ ಪುಣೆಗೆ ಸಾಗಿಸಲು ಯೋಜಿಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಸಂಬಂಧ ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 18/2026, ಕಲಂ 20 (ಬಿ) (ii) (ಸಿ) ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಯಶಸ್ವಿ ಕಾರ್ಯಾಚರಣೆ ನಡೆಸಿದ ಪಿಎಸ್ಐ ನಂದಿನಿ, ಸಿಬ್ಬಂದಿಗಳಾದ ವಿಜಯಕುಮಾರ, ಭೀಮರಾಯ, ಗಣೇಶ ಮತ್ತು ಕೈಲಾಸ ಅವರನ್ನೊಳಗೊಂಡ ತಂಡದ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಪ್ರದೀಪ ಗುಂಟಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.



