ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ ಹೈಡ್ರಾಮಾ: ಲಂಚ ಪಡೆಯುವಾಗ ಸಿಕ್ಕಿಬಿದ್ದು ಕೈ ಕೊಯ್ದುಕೊಂಡು ಆತ್ಮಹತ್ಯೆ ನಾಟಕ!

ಮೈಸೂರು: ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು (PDO), ಬಂಧನದಿಂದ ತಪ್ಪಿಸಿಕೊಳ್ಳಲು ಹರಿತವಾದ ಆಯುಧದಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಯ ನಾಟಕವಾಡಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಮುಳ್ಳೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ಸ್ವಾಮಿ ಎಂಬುವವರು ಇತ್ತೀಚೆಗೆ ನಿಧನರಾಗಿದ್ದರು. ಅವರ ನಿಧನದ ನಂತರ ಅನುಕಂಪದ ಆಧಾರದ ಮೇಲೆ ಅವರ ಪುತ್ರ ಮಹದೇವ್ ಅವರಿಗೆ ಕೆಲಸ ನೀಡಲಾಗಿತ್ತು. ಆದರೆ, ಮೃತ ಸ್ವಾಮಿ ಅವರ ಎರಡು ವರ್ಷದ ಬಾಕಿ ಸಂಬಳವಾದ ಸುಮಾರು 4 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲು ಪಿಡಿಒ ಮಂಜುಳಾ ಅವರು 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಬಡ ಕುಟುಂಬದ ಹಣ ಬಿಡುಗಡೆ ಮಾಡಲು ಲಂಚ ಕೇಳಿದ ಅಧಿಕಾರಿಯ ವಿರುದ್ಧ ಮಹದೇವ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಯೋಜನೆಯಂತೆ, ಕಚೇರಿಯಲ್ಲಿ ಮುಂಗಡವಾಗಿ 25 ಸಾವಿರ ರೂಪಾಯಿ ಹಣವನ್ನು ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮಂಜುಳಾ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ತಾನು ಲೋಕಾಯುಕ್ತ ಬಲೆಗೆ ಬಿದ್ದಿರುವುದು ತಿಳಿಯುತ್ತಿದ್ದಂತೆಯೇ ಕಂಗಾಲಾದ ಮಂಜುಳಾ, ಕಚೇರಿಯಲ್ಲೇ ಇದ್ದ ಹರಿತವಾದ ಆಯುಧದಿಂದ ತನ್ನ ಕೈಯನ್ನು ಕೊಯ್ದುಕೊಂಡು ರಾದ್ಧಾಂತ ಮಾಡಿದ್ದಾರೆ. ಅಧಿಕಾರಿಗಳ ಮುಂದೆಯೇ ಹೈಡ್ರಾಮಾ ಸೃಷ್ಟಿಸಿ, ತನಿಖೆಗೆ ಅಡ್ಡಿಪಡಿಸಲು ಮತ್ತು ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.
ತಕ್ಷಣ ಎಚ್ಚೆತ್ತ ಪೊಲೀಸರು ಗಾಯಗೊಂಡ ಪಿಡಿಒ ಮಂಜುಳಾ ಅವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆಯ ನಂತರ ಲೋಕಾಯುಕ್ತ ಪೊಲೀಸರು ಕಾನೂನು ಪ್ರಕ್ರಿಯೆ ಹಾಗೂ ವಿಚಾರಣೆಯನ್ನು ಮುಂದುವರಿಸಲಿದ್ದಾರೆ.



