ಮದುವೆಯಾದ ಎರಡೇ ತಿಂಗಳಿಗೆ ಪತಿಗೆ ‘ಮುಹೂರ್ತ’ ಇಟ್ಟ ಪತ್ನಿ: ಪ್ರಿಯಕರನೊಂದಿಗೆ ಸೇರಿ ಗುಜರಿ ವ್ಯಾಪಾರಿಯ ಭೀಕರ ಹತ್ಯೆ!

ತುಮಕೂರು: ಪ್ರೀತಿಯ ಅಮಲಿನಲ್ಲಿ ಮದುವೆಯಾದ ಎರಡೇ ತಿಂಗಳಿಗೆ ಪತಿಯನ್ನೇ ಸಂಚು ರೂಪಿಸಿ ಕೊಲೆಗೈದ ಘಟನೆ ತಿಪಟೂರಿನಲ್ಲಿ ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರ ಹಾಗೂ ಆತನ ಗ್ಯಾಂಗ್ ಮೂಲಕ ಹತ್ಯೆ ಮಾಡಿಸಿದ ಕಿರಾತಕಿ ಪತ್ನಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು:
ಫರ್ಜಾನ (31) – ಮೃತನ ಪತ್ನಿ ಹಾಗೂ ಕೃತ್ಯದ ಮಾಸ್ಟರ್ ಮೈಂಡ್.
ಧನರಾಜ್ (24) – ಫರ್ಜಾನ ಪ್ರಿಯಕರ.
ವೆಂಕಟೇಶ್ (24) – ಧನರಾಜ್ ಗೆಳೆಯ.
ದರ್ಶನ್ (24) – ಹತ್ಯೆಗೆ ಸಹಕರಿಸಿದ ಆರೋಪಿ.
ಮೃತ ಮನ್ಸೂರ್ ಪಾಷ (31) ತಿಪಟೂರಿನಲ್ಲಿ ಗುಜರಿ ವ್ಯಾಪಾರಿಯಾಗಿದ್ದರು. ಕಳೆದ ಜನವರಿಯಲ್ಲಿ ಫರ್ಜಾನ ಜೊತೆ ಇವರ ವಿವಾಹ ಕುಟುಂಬಸ್ಥರ ಸಮ್ಮುಖದಲ್ಲಿ ನಡೆದಿತ್ತು. ಆದರೆ, ಫರ್ಜಾನಳಿಗೆ ಮೊದಲೇ ಚಿಕ್ಕಮಗಳೂರಿನ ಧನರಾಜ್ ಎಂಬಾತನೊಂದಿಗೆ ಅಕ್ರಮ ಸಂಬಂಧವಿತ್ತು. ಈ ಹಿಂದೆ ಮದುವೆಯಾಗಿದ್ದ ಫರ್ಜಾನಳ ಮೊದಲ ಪತಿ ಮೃತಪಟ್ಟ ಬಳಿಕ, ಅಕ್ಕನ ಮನೆಗೆ ಹೋಗುತ್ತಿದ್ದಾಗ ಧನರಾಜ್ ಪರಿಚಯವಾಗಿ ಪ್ರೇಮವಾಗಿತ್ತು. ಒಮ್ಮೆ ಇವರಿಬ್ಬರು ರೈಲು ನಿಲ್ದಾಣದಲ್ಲಿ ಸಿಕ್ಕಿಬಿದ್ದಾಗ ಪೋಷಕರು ಗಲಾಟೆ ಮಾಡಿ, ತರಾತುರಿಯಲ್ಲಿ ಮನ್ಸೂರ್ ಜೊತೆ ಆಕೆಯ ಮದುವೆ ಮಾಡಿಸಿದ್ದರು.
ಮದುವೆಯಾದರೂ ಧನರಾಜ್‌ನನ್ನು ಮರೆಯದ ಫರ್ಜಾನ, ಹೊಸ ಸಿಮ್ ಖರೀದಿಸಿ ಆತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಳು. ಪತಿಯನ್ನು ದಾರಿಯಿಂದ ತಪ್ಪಿಸಿದರೆ ಮಾತ್ರ ತಾವು ಒಂದಾಗಲು ಸಾಧ್ಯ ಎಂದು ನಿರ್ಧರಿಸಿದ ಜೋಡಿ, ಮನ್ಸೂರ್ ಹತ್ಯೆಗೆ ಸಂಚು ರೂಪಿಸಿತು.
ಮಾರ್ಚ್ 4: ಸಂಚಿನಂತೆ ಆರೋಪಿ ದರ್ಶನ್ ಮುಖಾಂತರ ಮನ್ಸೂರ್‌ಗೆ ಕರೆ ಮಾಡಿ “ಮಾರಾಟಕ್ಕೆ ಗುಜರಿ ಸಾಮಾನುಗಳಿವೆ” ಎಂದು ನಂಬಿಸಿ ತಿಪಟೂರು ಗ್ರಾಮಾಂತರದ ಚಿಕ್ಕಕೊಟ್ಟಗಿಹಳ್ಳಿ ಗ್ರಾಮದ ತೋಟವೊಂದಕ್ಕೆ ಕರೆಸಿಕೊಳ್ಳಲಾಯಿತು.
ಹಲ್ಲೆ: ಮನ್ಸೂರ್ ಅಲ್ಲಿಗೆ ತಲುಪುತ್ತಿದ್ದಂತೆ ಹೊಂಚು ಹಾಕಿದ್ದ ಆರೋಪಿಗಳು, ಗಾಡಿಯ ಶಾಕ್ ಅಬ್ಸರ್ವರ್‌ನಿಂದ ತಲೆಗೆ ಬಲವಾಗಿ ಹೊಡೆದು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.
ಮಾರ್ಚ್ 4ರಂದು ನಾಪತ್ತೆಯಾಗಿದ್ದ ಮನ್ಸೂರ್ ಅವರ ಶವ ತೋಟದಲ್ಲಿ ಪತ್ತೆಯಾದಾಗ ಪ್ರಕರಣ ದಾಖಲಿಸಿಕೊಂಡ ತಿಪಟೂರು ಗ್ರಾಮಾಂತರ ಪೊಲೀಸರು ತನಿಖೆ ಆರಂಭಿಸಿದರು. ಕೊನೆಯದಾಗಿ ಮನ್ಸೂರ್‌ಗೆ ಬಂದಿದ್ದ ಫೋನ್ ಕರೆ (ದರ್ಶನ್‌ನ ಮೊಬೈಲ್‌ನಿಂದ) ಪೊಲೀಸರಿಗೆ ದೊಡ್ಡ ಸುಳಿವು ನೀಡಿತು. ತಾಂತ್ರಿಕ ಮಾಹಿತಿ ಆಧರಿಸಿ ಮೂವರು ಯುವಕರನ್ನು ಬಂಧಿಸಿದಾಗ, ಪತ್ನಿ ಫರ್ಜಾನಳೇ ಈ ಕೊಲೆಯ ಸೂತ್ರಧಾರಿ ಎಂಬ ಸ್ಫೋಟಕ ಸತ್ಯ ಬಯಲಾಗಿದೆ.
ಪ್ರಸ್ತುತ ನಾಲ್ವರು ಆರೋಪಿಗಳನ್ನು ಪೊಲೀಸರು ಕಂಬಿ ಎಣಿಸುವಂತೆ ಮಾಡಿದ್ದಾರೆ. ತಿಪಟೂರು ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.



