ಜಿಲ್ಲಾ ಸುದ್ದಿಕ್ರೈಂ ಸುದ್ದಿರಾಜ್ಯ ಸುದ್ದಿಸ್ಥಳೀಯ ಸುದ್ದಿಗಳು

ಸಂತಪೂರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ – 19.77 ಲಕ್ಷ ಮೌಲ್ಯದ ಗಾಂಜಾ ಜಪ್ತಿ, ಇಬ್ಬರು ಆರೋಪಿಗಳ ಬಂಧನ

Share News

ಬೀದರ್: ಜಿಲ್ಲೆಯ ಸಂತಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಪೊಲೀಸರು, ಸುಮಾರು 19,77,500/- ರೂ. ಮೌಲ್ಯದ ಮುದ್ದೆಮಾಲು ಹಾಗೂ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ದಿನಾಂಕ 09/03/2026 ರಂದು ಜಂಬಗಿ (ಬಿ) ಗ್ರಾಮದಿಂದ ಸೊರಹಳ್ಳಿ ಮಾರ್ಗವಾಗಿ ಮೋಟಾರ್ ಸೈಕಲ್ ಮೇಲೆ ಅಕ್ರಮವಾಗಿ ಗಾಂಜಾವನ್ನು ಅಂತರ-ರಾಜ್ಯಕ್ಕೆ ಮಾರಾಟ ಮಾಡಲು ಸಾಗಾಟ ಮಾಡುತ್ತಿರುವ ಬಗ್ಗೆ ಸಂತಪೂರ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ದಿನೇಶ ಎಂ.ಟಿ ರವರಿಗೆ ಖಚಿತ ಮಾಹಿತಿ ಲಭಿಸಿತ್ತು.

ತಕ್ಷಣ ಕಾರ್ಯಪ್ರವೃತ್ತರಾದ ಪಿ.ಎಸ್.ಐ ಅವರು ಮೇಲಾಧಿಕಾರಿಗಳ ಗಮನಕ್ಕೆ ತಂದು, ಅವರ ಮಾರ್ಗದರ್ಶನದಂತೆ ವಿಶೇಷ ತಂಡವನ್ನು ರಚಿಸಿ ದಾಳಿ ನಡೆಸಿದರು.

ಜಂಬಗಿ (ಬಿ) ಶಿವಾರದ ದತ್ತ ಮಂದಿರದ ಎದುರಿಗಿನ ರಸ್ತೆಯಲ್ಲಿ ಪೊಲೀಸರು ಹೊಂಚು ಹಾಕಿ ಕುಳಿತಿದ್ದಾಗ, ಮೋಟಾರ್ ಸೈಕಲ್ ಮೇಲೆ ಬಂದ ಇಬ್ಬರು ವ್ಯಕ್ತಿಗಳನ್ನು ತಡೆದು ತಪಾಸಣೆ ನಡೆಸಲಾಯಿತು. ಈ ವೇಳೆ ಚೀಲಗಳಲ್ಲಿ ಅಡಗಿಸಿಟ್ಟಿದ್ದ ಒಟ್ಟು 38 ಕೆ.ಜಿ 950 ಗ್ರಾಂ ಗಾಂಜಾ ಪತ್ತೆಯಾಗಿದೆ.

ಜಪ್ತಿಯಾದ ಗಾಂಜಾ ಮೌಲ್ಯ: ಅಂದಾಜು 19,47,500/- ರೂ. ಮೋಟಾರ್ ಸೈಕಲ್ ಮೌಲ್ಯ: ಅಂದಾಜು 30,000/- ರೂ. ಒಟ್ಟು ಮೌಲ್ಯ: 19,77,500/- ರೂ.

ಈ ಸಂಬಂಧ ಸಂತಪೂರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 26/2026, ಕಲಂ: 20(b)(ii)(C), 29 ಎನ್.ಡಿ.ಪಿ.ಎಸ್ (NDPS) ಆಕ್ಟ್-1985 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಯಶಸ್ವಿ ಕಾರ್ಯಾಚರಣೆಯು ಬೀದರ್ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಪ್ರದೀಪ್ ಗುಂಟಿ ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಚಂದ್ರಕಾಂತ ಪೂಜಾರಿ, ಭಾಲ್ಕಿ ಡಿವೈಎಸ್‌ಪಿ ಶ್ರೀ ಶಿವಾನಂದ ಪವಾಡಶೆಟ್ಟಿ ಹಾಗೂ ಔರಾದ್ ಸಿಪಿಐ ಶ್ರೀ ರಘುವೀರಸಿಂಗ ಠಾಕೂರ ರವರ ನೇರ ಮಾರ್ಗದರ್ಶನದಲ್ಲಿ ನಡೆದಿದೆ.

ಪಿ.ಎಸ್.ಐ ದಿನೇಶ ಎಂ.ಟಿ ಅವರೊಂದಿಗೆ ಎಎಸ್‌ಐ ಶೇಷರಾವ, ಸಿಬ್ಬಂದಿಗಳಾದ ಅರುಣಸಿಂಗ, ಶ್ರೀಕಾಂತ, ಸಂತೋಷ, ರಾಮರೆಡ್ಡಿ, ಸುಭಾಷ, ಕೊಟ್ರೇಶ, ಪ್ರಕಾಶ, ರಾಜಶೇಖರ, ಗೌತಮ್ ಹಾಗೂ ದತ್ತಾತ್ರಿ ಅವರು ಪಾಲ್ಗೊಂಡಿದ್ದರು. ತಂಡದ ಈ ಸಮಯೋಚಿತ ಮತ್ತು ಸಾಹಸಮಯ ಕೆಲಸವನ್ನು ಎಸ್ಪಿ ಶ್ರೀ ಪ್ರದೀಪ್ ಗುಂಟಿ ಅವರು ಶ್ಲಾಘಿಸಿದ್ದಾರೆ.

ವರದಿ :-ಆಂಟೋನಿ ಪತ್ರಕರ್ತ


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!