ಶಿವಮೊಗ್ಗ: 7ನೇ ತರಗತಿ ಪ್ರವೇಶಕ್ಕೆ ಲಂಚ ಪಡೆಯುತ್ತಿದ್ದ ವಸತಿ ಶಾಲೆ ಪ್ರಾಂಶುಪಾಲ ಲೋಕಾಯುಕ್ತ ಬಲೆಗೆ

ಶಿವಮೊಗ್ಗ: 7 ನೇ ತರಗತಿಯ ಪ್ರವೇಶಾತಿ ನೀಡಲು ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ವಸತಿ ಶಾಲೆಯ ಪ್ರಾಂಶುಪಾಲರೊಬ್ಬರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಭದ್ರಾವತಿ ತಾಲೂಕಿನ ಹುಣಸೆಕಟ್ಟೆ ಗ್ರಾಮದಲ್ಲಿ ನಡೆದಿದೆ.
ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ್ ಅವರ ನೇತೃತ್ವದಲ್ಲಿ ನಡೆಸಲಾದ ದಾಳಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಹುಣಸೆಕಟ್ಟೆ ಗ್ರಾಮದ ವಸತಿ ಶಾಲೆಯಲ್ಲಿ 7 ನೇ ತರಗತಿಯ ಪ್ರವೇಶಕ್ಕಾಗಿ ಹಾಗೂ ಶಾಲೆಯ ಡ್ರಮ್ ಸೆಟ್ ಕೊಡುವ ನೆಪದಲ್ಲಿ ಪ್ರಾಂಶುಪಾಲರು ಚಂದ್ರಪ್ಪ ಎಂಬುವರಿಂದ ಒಟ್ಟು ₹20,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಕುರಿತು ನೀಡಿದ ದೂರಿನನ್ವಯ ಲೋಕಾಯುಕ್ತ ಅಧಿಕಾರಿಗಳು ಯೋಜನೆ ರೂಪಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಚಂದ್ರಪ್ಪ ಎಂಬುವವರಿಂದ ಶಾಲೆಯ ಕೊಠಡಿಯಲ್ಲೇ ಮುಂಗಡವಾಗಿ ₹10,000 ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ರೆಡ್ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.
ದಾಳಿಯ ಸಂದರ್ಭದಲ್ಲಿ ಆರೋಪಿಯಿಂದ ಲಂಚದ ಹಣವನ್ನು ವಶಪಡಿಸಿಕೊಂಡಿರುವ ಲೋಕಾಯುಕ್ತ ಅಧಿಕಾರಿಗಳು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ತನಿಖೆ ಕೈಗೊಂಡಿದ್ದಾರೆ.



