ಪರೀಕ್ಷೆಯ ಅವ್ಯವಸ್ಥೆ ಖಂಡಿಸಿ ನ್ಯಾಯಾಂಗ ತನಿಖೆಗೆ ಸ್ವಾಕರವೇ ಆಗ್ರಹ: ತಹಶೀಲ್ದಾರ್ಗೆ ಮನವಿ

ರಾಣೇಬೆನ್ನೂರು: ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ಶಾರದಾಂಬಾ ಪಿಯು ಕಾಲೇಜಿನಲ್ಲಿ ಆಗಸ್ಟ್ 2ರಂದು ನಡೆದ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಹಾಗೂ ಓಎಂಆರ್ (OMR) ಹಾಳೆ ನಿರ್ವಹಣೆಯಲ್ಲಿ ಗಂಭೀರ ಲೋಪಗಳು ಸಂಭವಿಸಿವೆ ಎಂದು ಆರೋಪಿಸಿ, ಸಮಗ್ರ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಕರವೇ) ಪದಾಧಿಕಾರಿಗಳು ತಾಲೂಕು ದಂಡಾಧಿಕಾರಿಗಳ (ತಹಶೀಲ್ದಾರ್) ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪರೀಕ್ಷಾ ಕೇಂದ್ರದಲ್ಲಿ ಬೆಳಿಗ್ಗೆ 10.30ಕ್ಕೆ ನೀಡಬೇಕಿದ್ದ ಪ್ರಶ್ನೆಪತ್ರಿಕೆಯನ್ನು ಸುಮಾರು 30 ನಿಮಿಷ ತಡವಾಗಿ ವಿತರಿಸಿದ್ದರಿಂದ ಅಭ್ಯರ್ಥಿಗಳು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಜೊತೆಗೆ ಪರೀಕ್ಷಾ ಸಿಬ್ಬಂದಿ ಹಾಗೂ ಕರ್ತವ್ಯದಲ್ಲಿದ್ದ ಪೊಲೀಸರ ನಡುವೆ ಸಮನ್ವಯದ ಕೊರತೆ ಎದ್ದುಕಂಡಿದೆ. ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಪ್ರಶ್ನೆಪತ್ರಿಕೆಯನ್ನು ಕೊಠಡಿಯಿಂದ ಹೊರಗೆ ಕೊಂಡೊಯ್ದಿರುವುದು ಪೇಪರ್ ಲೀಕ್ ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಸ್ಥಳಕ್ಕೆ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಪ್ರಮುಖ ಬೇಡಿಕೆಗಳು:
ಪರೀಕ್ಷಾ ಲೋಪದ ಕುರಿತು ತಕ್ಷಣವೇ ನ್ಯಾಯಾಂಗ ತನಿಖೆ ನಡೆಸಬೇಕು.
ಕರ್ತವ್ಯಲೋಪ ಎಸಗಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸಿ ಇಲಾಖಾ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.
ಸಸಿ ಪರೀಕ್ಷಾ ಕೇಂದ್ರದ ಅಭ್ಯರ್ಥಿಗಳಿಗೆ ಉಚಿತವಾಗಿ ಮರು ಪರೀಕ್ಷೆ ಆಯೋಜಿಸಬೇಕು.
ಮುಂದಿನ ನೇಮಕಾತಿ ಪರೀಕ್ಷೆಗಳಲ್ಲಿ ಬಯೋಮೆಟ್ರಿಕ್ ಸೇರಿದಂತೆ ಪಾರದರ್ಶಕ ಭದ್ರತಾ ವ್ಯವಸ್ಥೆಯನ್ನು ಕಡ್ಡಾಯಗೊಳಿಸಬೇಕು.
ಈ ಸಂದರ್ಭದಲ್ಲಿ ಸ್ವಾಭಿಮಾನಿ ಕರವೇ ಪದಾಧಿಕಾರಿಗಳಾದ ಕೃಷ್ಣಾ ವಿ., ನಿತ್ಯಾನಂದ ಕುಂದಾಪುರ, ಶಿವಕುಮಾರ ಜಾದವ್, ಆನಂದ್ ಲಮಾಣಿ, ಪರಶುರಾಮ್ ಕುರುವತ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



