ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ ಜಾಗತಿಕ ಸ್ಪರ್ಶ: ವರ್ಷ ಪೂರ್ತಿ ‘ಅಮ್ಯೂಸ್ಮೆಂಟ್ ಪಾರ್ಕ್’ ಮಾಡಲು ಮಾಸ್ಟರ್ ಪ್ಲಾನ್!

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ದಸರಾ ವಸ್ತುಪ್ರದರ್ಶನವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಕರ್ನಾಟಕ ಪ್ರದರ್ಶನ ಪ್ರಾಧಿಕಾರವು ಸಜ್ಜಾಗಿದೆ. ವಸ್ತು ಪ್ರದರ್ಶನ ಆವರಣವನ್ನು ಕೇವಲ ದಸರಾ ದಿನಗಳಿಗಷ್ಟೇ ಸೀಮಿತಗೊಳಿಸದೆ, ವರ್ಷಪೂರ್ತಿ ಕಾರ್ಯನಿರ್ವಹಿಸುವ ‘ಅಮ್ಯೂಸ್ಮೆಂಟ್ ಪಾರ್ಕ್’ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಬೃಹತ್ ಯೋಜನೆ ಸರ್ಕಾರದ ಮುಂದಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರಕ್ಕೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. 2026ರ ದಸರಾ ವಸ್ತು ಪ್ರದರ್ಶನವು ದಸರಾ ಹಬ್ಬದಿಂದ ಆರಂಭವಾಗಿ ಒಟ್ಟು 90 ದಿನಗಳ ಕಾಲ (ಜನವರಿ 8, 2027ರವರೆಗೆ) ಸಾರ್ವಜನಿಕರಿಗೆ ಮುಕ್ತವಾಗಿರಲಿದ್ದು, ಬೇಡಿಕೆಗೆ ಅನುಗುಣವಾಗಿ ಅವಧಿ ವಿಸ್ತರಿಸಲಾಗುವುದು ಎಂದರು.
ಕಳೆದ ಬಾರಿ ಪ್ರವಾಸಿಗರ ಸಂಖ್ಯೆ ದಾಖಲೆಯ 15 ಲಕ್ಷದ ಗಡಿ ದಾಟಿದೆ. ಹೀಗಾಗಿ, ಪ್ರತಿ ವರ್ಷ ತಾತ್ಕಾಲಿಕ ಮಳಿಗೆ ನಿರ್ಮಿಸುವ ವೆಚ್ಚ ತಪ್ಪಿಸಲು ಈಗಾಗಲೇ ಕಾಯಂ ಮಳಿಗೆಗಳನ್ನು ಕಲ್ಪಿಸಲಾಗಿದೆ. ಪ್ರವಾಸಿಗರ ಅನುಕೂಲಕ್ಕಾಗಿ 4 ಕೋಟಿ ರೂಪಾಯಿ ವೆಚ್ಚದಲ್ಲಿ 32 ಶಾಶ್ವತ ಮಳಿಗೆಗಳನ್ನು ಹಾಗೂ ಅತ್ಯಾಧುನಿಕ ಶೆಲ್ಟರ್ ಒಳಗೊಂಡ ಶಾಶ್ವತ ಫುಡ್ ಕೋರ್ಟ್ ವ್ಯವಸ್ಥೆಯನ್ನು ನಿರ್ಮಿಸಲಾಗುತ್ತಿದೆ. ಸಾರ್ವಜನಿಕರ ನೆಚ್ಚಿನ ಸಂಗೀತ ಕಾರಂಜಿ, ಲೇಸರ್ ಶೋ, ಬೋಟಿಂಗ್ ಹಾಗೂ ರಾಜೀವ್ ಗಾಂಧಿ ಡ್ರ್ಯಾಗನ್ ಪಾಂಡ್ ಮನರಂಜನೆ ಈ ಬಾರಿಯೂ ಮುಂದುವರಿಯಲಿದೆ.
ಸಡಗರದ ದಸರಾ: ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇರುವುದರಿಂದ ಸರಳ ದಸರಾ ಆಚರಣೆಯ ಚರ್ಚೆ ಇತ್ತಾದರೂ, ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಸಡಗರ ಮತ್ತು ವಿಜೃಂಭಣೆಯಿಂದಲೇ ಆಚರಿಸಲು ತೀರ್ಮಾನಿಸಲಾಗಿದೆ.
ದಸರಾದಲ್ಲಿ ಕಂಬಳ: ಕರಾವಳಿ ಭಾಗದ ಸಾಂಸ್ಕೃತಿಕ ಕ್ರೀಡೆಯಾದ ‘ಕಂಬಳ’ವನ್ನು ಇಡೀ ರಾಜ್ಯಕ್ಕೆ ಪರಿಚಯಿಸಲು ಮೈಸೂರು ದಸರಾದಲ್ಲಿ ಆಯೋಜಿಸುವಂತೆ ಶಾಸಕರು ಒಲವು ವ್ಯಕ್ತಪಡಿಸಿದ್ದು, ಸಿಎಂ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
ನಗರದ ಹೊರವಲಯಕ್ಕೆ ಸಾರ್ವಜನಿಕ ಸಮಾರಂಭಗಳು: ಮೈಸೂರು ನಗರದ ಮಧ್ಯಭಾಗದಲ್ಲಿ ರ್ಯಾಲಿ, ಸಂಗೀತ ಕಚೇರಿಗಳಿಂದಾಗುವ ಸಂಚಾರ ದಟ್ಟಣೆ ತಪ್ಪಿಸಲು, ಹೊರವಲಯದಲ್ಲಿ ಪ್ರತ್ಯೇಕ ಮೈದಾನಸೇವೆಯನ್ನು ಕಲ್ಪಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ರಸ್ತೆಗಳ ದುರಸ್ತಿ: ದಸರಾ ಆರಂಭಕ್ಕೂ ಮುನ್ನವೇ ಮೈಸೂರಿನ ಎಲ್ಲಾ ರಸ್ತೆಗಳ ರಿಪೇರಿ ಹಾಗೂ ಹೊಸ ರಸ್ತೆ ಕಾಮಗಾರಿ ಮುಗಿಸಲು ಇಂಜಿನಿಯರ್ಗಳಿಗೆ ಗಡುವು ನೀಡಲಾಗಿದೆ.
“ಬೆಂಗಳೂರು ಮಹಾನಗರ ಪಾಲಿಕೆ (BBMP) ಚುನಾವಣೆಗಳನ್ನು ಈ ವರ್ಷದ ನವೆಂಬರ್ನಲ್ಲಿ ನಡೆಸಲಾಗುವುದು. ಅದರ ಬೆನ್ನಲ್ಲೇ ಗ್ರಾಮ ಪಂಚಾಯಿತಿ ಚುನಾವಣೆಗಳೂ ನಡೆಯಲಿವೆ. ‘ಬೃಹತ್ ಮೈಸೂರು’ ಪ್ರಸ್ತಾವನೆ ಹಾಗೂ ಸೆನ್ಸಸ್ ಪ್ರಕ್ರಿಯೆಯಿಂದಾಗಿ ಮೈಸೂರು ಪಾಲಿಕೆ ಚುನಾವಣೆ ವಿಳಂಬವಾಗಿತ್ತು. ಆದರೆ ಈಗ ಸೆನ್ಸಸ್ ಮುಗಿಯುವವರೆಗೆ ಕಾಯದೇ ಶೀಘ್ರದಲ್ಲೇ ಸಿಎಂ ಜೊತೆ ಚರ್ಚಿಸಿ ಮೈಸೂರು ಮಹಾನಗರ ಪಾಲಿಕೆ ಚುನಾವಣೆ ನಡೆಸಲಾಗುವುದು.”
ಬೆಂಗಳೂರಿನಲ್ಲಿ ಫುಟ್ಪಾತ್ ಅತಿಕ್ರಮಣ ತೆರವು ಅನಿವಾರ್ಯವಾಗಿದೆ. ಆದರೆ ಮೈಸೂರು ಸೇರಿದಂತೆ ಇತರ ನಗರಗಳಲ್ಲಿ ಮಾನವೀಯತೆಯ ದೃಷ್ಟಿಯಿಂದ ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆಯಾಗದಂತೆ ನೋಟಿಸ್ ನೀಡಿ, ಪರ್ಯಾಯ ಜಾಗ ಕಲ್ಪಿಸಿ ನಂತರ ತೆರವು ಮಾಡಲಾಗುವುದು. ಮೈಸೂರಿನಲ್ಲಿ ಇದಕ್ಕಾಗಿ ಪ್ರತ್ಯೇಕ ‘ಫುಡ್ ಸ್ಟ್ರೀಟ್’ ಮತ್ತು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್, ವಿಜಯ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.



