ಮಾರಿಕುಪ್ಪಂ ರೈಲಿನಲ್ಲಿ ಪೊಲೀಸರ ಆಕಸ್ಮಿಕ ತಪಾಸಣೆ: ಮಾದಕ ವಸ್ತು ನಿಯಂತ್ರಣ ಹಾಗೂ ಅಪರಾಧ ತಡೆಗೆ ಸಾರ್ವಜನಿಕ ಜಾಗೃತಿ

ಉರಿಗಾಂ/ಆಂಡರ್ಸನ್ ಪೇಟೆ: ಉರಿಗಾಂ ಹಾಗೂ ಆಂಡರ್ಸನ್ ಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿ ಜಂಟಿಯಾಗಿ ಮಾರಿಕುಪ್ಪಂ ರೈಲಿನಲ್ಲಿ ಆಕಸ್ಮಿಕ ತಪಾಸಣೆ ನಡೆಸಿ, ಗಾಂಜಾ ಮಾರಾಟ ಹಾಗೂ ಸೇವನೆ ತಡೆಯುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಿದರು.
ಇಂದು ಬೆಳಿಗ್ಗೆ ನಡೆದ ಈ ತಪಾಸಣೆ ವೇಳೆ ಪೊಲೀಸರು ರೈಲು ಪ್ರಯಾಣಿಕರಿಗೆ ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಕಾನೂನು ಅರಿವು ಕಾರ್ಯಕ್ರಮ ನಡೆಸಿದರು.
ಅಪರಾಧ ತಡೆಗೆ ಎಚ್ಚರಿಕೆ: ರೈಲು ಪ್ರಯಾಣದ ಸಂದರ್ಭದಲ್ಲಿ ಸಂಭವಿಸಬಹುದಾದ ಸರಗಳ್ಳತನ, ಜೇಬುಗಳ್ಳತನ ಹಾಗೂ ಇತರ ಕಳ್ಳತನದ ಪ್ರಕರಣಗಳ ಕುರಿತು ಪ್ರಯಾಣಿಕರು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪೊಲೀಸರು ಮಾಹಿತಿ ನೀಡಿ, ಜಾಗರೂಕರಾಗಿರಲು ಸೂಚಿಸಿದರು.
ಸಾಮಾಜಿಕ ಜವಾಬ್ದಾರಿ ಹಾಗೂ ಸೌಜನ್ಯ: ರೈಲಿನಲ್ಲಿ ಪ್ರಯಾಣಿಸುವಾಗ ಮಹಿಳೆಯರಿಗೆ ಮತ್ತು ಹಿರಿಯ ನಾಗರಿಕರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಬಿಟ್ಟುಕೊಡುವಂತೆ ಪ್ರಯಾಣಿಕರಲ್ಲಿ ಮನವಿ ಮಾಡಿದರು.
ಕಾನೂನು ವಿರೋಧಿ ಚಟುವಟಿಕೆಗಳಿಗೆ ತಡೆ: ಗಾಂಜಾ ಸರಬರಾಜು, ಸೇವನೆ ಸೇರಿದಂತೆ ಯಾವುದೇ ರೀತಿಯ ಕಾನೂನು ಬಾಹಿರ ಹಾಗೂ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಡಂತೆ ಪ್ರಯಾಣಿಕರಿಗೆ ಹಾಗೂ ಯುವಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಯಿತು.




