ಕೌದಳ್ಳಿ ಗ್ರಾಮ ಪಂಚಾಯಿತಿ ಬೇಜವಾಬ್ದಾರಿತನ: ರಸ್ತೆಯಲ್ಲೇ ಹರಿಯುತ್ತಿದೆ ತ್ಯಾಜ್ಯ-ಕೆಸರು ನೀರು!

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರೋಷ | ದುರ್ನಾತ, ಸೊಳ್ಳೆ ಕಾಟಕ್ಕೆ ನಾಯಕರ ಕಾಲೋನಿ ನಿವಾಸಿಗಳು ಹೈರಾಣು
ಹನೂರು: “ಗ್ರಾಮಗಳು ಉದ್ದಾರವಾದರೆ ದೇಶ ಉದ್ದಾರವಾಗುತ್ತದೆ” ಎಂಬ ಮಹಾತ್ಮ ಗಾಂಧೀಜಿಯವರ ಆಶಯವನ್ನು ಹನೂರು ತಾಲೂಕಿನ ಕೌದಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಂಪೂರ್ಣವಾಗಿ ಹಳ್ಳ ಹಿಡಿಸಿದ್ದಾರೆ. ಕೌದಳ್ಳಿ ಗ್ರಾಮದ ನಾಯಕರ ಜನಾಂಗದ ಕಾಲೋನಿಯಲ್ಲಿ ಚರಂಡಿ ನೈರ್ಮಲ್ಯ ಹಾಗೂ ರಸ್ತೆಗಳ ದುರಸ್ತಿ ಕಾಣದೆ ನಿವಾಸಿಗಳು ತೀವ್ರ ನರಕಯಾತನೆ ಅನುಭವಿಸುತ್ತಿದ್ದಾರೆ.
ಕಾಲೋನಿಯಲ್ಲಿ ಹಲವು ವರ್ಷಗಳಿಂದ ಚರಂಡಿಗಳ ಹೂಳು ತೆಗೆಯದ ಕಾರಣ, ಕಲುಷಿತ ನೀರು ಮತ್ತು ತ್ಯಾಜ್ಯ ರಸ್ತೆಯಲ್ಲೇ ಸಂಗ್ರಹಗೊಳ್ಳುತ್ತಿದೆ. ನೆನ್ನೆ ಸುರಿದ ಮಳೆಗೆ ಚರಂಡಿಯ ಅಸಹ್ಯಕರ ತ್ಯಾಜ್ಯ ರಸ್ತೆಯಿಡೀ ಹರಡಿದ್ದು, ಮಾರ್ಗಗಳು ಕೆಸರು ಗದ್ದೆಯಂತಾಗಿವೆ. ಇದರಿಂದಾಗಿ ವೃದ್ಧರು, ಮಕ್ಕಳು ಹಾಗೂ ಹಗಲು ವೇಳೆಯಲ್ಲೇ ಸೊಳ್ಳೆ, ಕ್ರಿಮಿಕೀಟಗಳ ಕಾಟದಿಂದ ಸಾರ್ವಜನಿಕರು ಬದುಕುವುದೇ ದುಸ್ತರವಾಗಿದೆ.
ಮನವಿಗಳಿಗೆ ಸಿಗದ ಸ್ಪಂದನೆ:
ರಸ್ತೆ ಮತ್ತು ಚರಂಡಿ ಸ್ವಚ್ಛಗೊಳಿಸಿ ಮೂಲಸೌಕರ್ಯ ಕಲ್ಪಿಸುವಂತೆ ಸ್ಥಳೀಯ ನಿವಾಸಿಗಳು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದು, ಸಮಸ್ಯೆ ಆಲಿಸಬೇಕಾದ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕಣ್ಣು ಮುಚ್ಚಿ ಕುಳಿತಿದೆ ಎಂದು ಗ್ರಾಮಸ್ಥರು ಅಂತರಾಳದ ನೋವನ್ನು ತೋಡಿಕೊಂಡಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಮೇಲಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಕೌದಳ್ಳಿ ನಾಯಕರ ಬೀದಿಯಲ್ಲಿ ಶುಚಿತ್ವ ಕಾಪಾಡಿ, ಚರಂಡಿ ಹೂಳು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
- ಶಾರುಕ್ ಖಾನ್, ಪತ್ರಕರ್ತರು, ಹನೂರು






