ರಾಜ್ಯ ಸುದ್ದಿಸ್ಥಳೀಯ ಸುದ್ದಿಗಳು

ಬೆಂಗಳೂರು: ಹಸಿ ಕಸದಿಂದ ಇಂಧನ ಉತ್ಪಾದನೆಗೆ ಬೃಹತ್ ಯೋಜನೆ; ಜಿಬಿಎ ವ್ಯಾಪ್ತಿಯಲ್ಲಿ ಮತ್ತಷ್ಟು ಬಯೋಗ್ಯಾಸ್ ಘಟಕಗಳ ಸ್ಥಾಪನೆ

Share News

ಬೆಂಗಳೂರು: ನಗರದ ಹಸಿ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಜೈವಿಕ ಅನಿಲ (ಬಯೋಗ್ಯಾಸ್) ಉತ್ಪಾದಿಸುವ ನಿಟ್ಟಿನಲ್ಲಿ ಜಿಬಿಎ (Greater Bengaluru Authority) ವ್ಯಾಪ್ತಿಯಲ್ಲಿ ಮತ್ತಷ್ಟು ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ತಿಳಿಸಿದರು.

ಕೋರಮಂಗಲದಲ್ಲಿರುವ ‘ಕಸ-ರಸ’ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ನಗರದಲ್ಲಿ ಹಸಿ ಕಸದ ವಿಲೇವಾರಿ ಸಮಸ್ಯೆ ನೀಗಿಸಲು ವಿಕೇಂದ್ರೀಕೃತ ಘಟಕಗಳ ಸ್ಥಾಪನೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

ಕೋರಮಂಗಲದ ಘಟಕದಲ್ಲಿ ದಿನಕ್ಕೆ 10 ಟನ್ ಹಸಿ ಕಸದಿಂದ ಉತ್ಪತ್ತಿಯಾಗುವ ಬಯೋಗ್ಯಾಸ್ ಅನ್ನು ಸಮೀಪದ ಹೋಟೆಲ್‌ಗಳಿಗೆ ವಿತರಿಸಲಾಗುತ್ತಿದೆ. ಪ್ರತಿದಿನ ಸುಮಾರು 120 ಕೆಜಿ ಗ್ಯಾಸ್ ಪೂರೈಕೆಯಾಗುತ್ತಿದ್ದು, ಇದರಿಂದ ದಿನಕ್ಕೆ ಅಂದಾಜು 8,400 ರೂ. ಆದಾಯ ಲಭ್ಯವಾಗುತ್ತಿದೆ. ಈ ಮಾದರಿಯನ್ನು ನಗರದ ಇತರೆಡೆಗಳಿಗೂ ವಿಸ್ತರಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.

ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ (BSWML) ಸಿಇಒ ಕರೀಗೌಡ ಅವರು ಮಾತನಾಡಿ, “ಹಿಂದೆ ನಿರ್ಮಾಣವಾಗಿದ್ದ 12 ಘಟಕಗಳಲ್ಲಿ ಪ್ರಸ್ತುತ 6 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಇನ್ನುಳಿದ 6 ಘಟಕಗಳನ್ನು ಶೀಘ್ರವೇ ನವೀಕರಿಸಿ ಸಕ್ರಿಯಗೊಳಿಸಲಾಗುವುದು. ಹೊಸದಾಗಿ 4 ವಿಕೇಂದ್ರೀಕೃತ ಘಟಕಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ,” ಎಂದರು.

ಈ ಸಂಸ್ಥೆಯ ಸಹಯೋಗದೊಂದಿಗೆ ದಿನಕ್ಕೆ 300 ಟನ್ ಸಾಮರ್ಥ್ಯದ ಘಟಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.

ಸುಮಾರು 1,000 ಟನ್ ಹಸಿ ತ್ಯಾಜ್ಯ ಸಂಸ್ಕರಿಸುವ ಘಟಕ ಸ್ಥಾಪನೆಗೆ ಮೆ. ಸಾತರಾಂ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಇಲ್ಲಿ ಉತ್ಪತ್ತಿಯಾಗುವ ಗ್ಯಾಸ್ ಅನ್ನು ಬಯೋ-CNG ರೂಪದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಭವಿಷ್ಯದಲ್ಲಿ ಪೈಪ್‌ಲೈನ್ ಮೂಲಕ ಮನೆಗಳಿಗೆ ತಲುಪಿಸುವ ಯೋಜನೆ ಇದೆ.

ಕಸದ ಮೂಲ ವಿಂಗಡಣೆ ಪ್ರಮುಖವಾಗಿದ್ದು, ನಾಗರಿಕರು ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ನೀಡಬೇಕು. ಅಷ್ಟೇ ಅಲ್ಲದೆ, ಮನೆಮಟ್ಟದಲ್ಲಿಯೇ ಸುಮಾರು 20,000 ರೂ. ವೆಚ್ಚದಲ್ಲಿ ಸಣ್ಣ ಬಯೋಗ್ಯಾಸ್ ಘಟಕಗಳನ್ನು ಸ್ಥಾಪಿಸಿಕೊಳ್ಳಲು ಅವಕಾಶವಿದ್ದು, ಇದನ್ನು ಅಡುಗೆ ಇಂಧನವಾಗಿ ಬಳಸಬಹುದು ಎಂದು ಮಹೇಶ್ವರ್ ರಾವ್ ಸಲಹೆ ನೀಡಿದರು.

ಬಯೋಗ್ಯಾಸ್ ಉತ್ಪಾದನೆಯ ನಂತರ ಉಳಿಯುವ ತ್ಯಾಜ್ಯವನ್ನು (ಸ್ಲಡ್ಜ್) ರೈತರು ‘ಲಿಕ್ವಿಡ್ ಫರ್ಟಿಲೈಸರ್’ ಆಗಿ ಬಳಸಲು ಅವಕಾಶವಿದೆ. ಇದರಿಂದ ಕಸದ ಸಮಸ್ಯೆಯೂ ನಿವಾರಣೆಯಾಗಿ, ನೈಸರ್ಗಿಕ ಗೊಬ್ಬರವೂ ದೊರೆಯಲಿದೆ.

ಪರಿಶೀಲನೆಯ ಸಂದರ್ಭದಲ್ಲಿ ದಕ್ಷಿಣ ನಗರ ಪಾಲಿಕೆ ಆಯುಕ್ತ ರಮೇಶ್ ಕೆ.ಎನ್, ಮುಖ್ಯ ಅಭಿಯಂತರ ಬಸವರಾಜ್ ಕಬಾಡೆ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!