೪೦ ಕಿ.ಮೀ ಸಿನಿಮೀಯ ಚೇಸಿಂಗ್: ಅಂತಾರಾಜ್ಯ ದನಗಳ್ಳರ ಗ್ಯಾಂಗ್ಗೆ ಯಾದಗಿರಿ ಪೊಲೀಸರ ಬಿಗ್ ಶಾಕ್!

ಯಾದಗಿರಿ : ಕಳೆದ ಎರಡು ವರ್ಷಗಳಿಂದ ರೈತರ ನಿದ್ದೆಗೆಡಿಸಿದ್ದ ಅಂತಾರಾಜ್ಯ ದನಗಳ್ಳರ ಗ್ಯಾಂಗ್ನ್ನು ಯಾದಗಿರಿ ಪೊಲೀಸರು ಅತ್ಯಂತ ಸಾಹಸಿಕ ಹಾಗೂ ಸಿನಿಮೀಯ ಶೈಲಿಯ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ದನಗಳನ್ನು ಕಳ್ಳತನ ಮಾಡಿ ಸ್ಕಾರ್ಪಿಯೋ ವಾಹನದಲ್ಲಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಸುಮಾರು ೪೦ ಕಿ.ಮೀ. ದೂರದವರೆಗೆ ಬೆನ್ನಟ್ಟಿದ ಪೊಲೀಸರು, ಯರಗೋಳ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಡೆದು ಆರು ಮಂದಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಖತರ್ನಾಕ್ ಕಳ್ಳರ ಕೃತ್ಯ ಹಾಗೂ ಕಾರ್ಯಾಚರಣೆ ವಿವರ:
ಕೃತ್ಯದ ಶೈಲಿ: ಮನೆ ಅಥವಾ ಕೊಟ್ಟಿಗೆಯಲ್ಲಿನ ರಾಸುಗಳಿಗೆ ಅರಿವಳಿಕೆ ಇಂಜೆಕ್ಷನ್ ನೀಡಿ, ಕಪ್ಪು ಸ್ಕಾರ್ಪಿಯೋ ವಾಹನದಲ್ಲಿ ಕಸಾಯಿಖಾನೆಗಳಿಗೆ ಸಾಗಿಸುತ್ತಿದ್ದರು.
ಕಲಬುರಗಿ ಸಂಪರ್ಕ: ಕಳ್ಳತನದ ಬಳಿಕ ಆರೋಪಿಗಳು ಕಲಬುರಗಿ ಭಾಗದಲ್ಲಿ ತಾತ್ಕಾಲಿಕವಾಗಿ ನೆಲೆಸುತ್ತಿದ್ದರು.
ಸಾಹಸಿಕ ಬೆನ್ನಟ್ಟುವಿಕೆ: ವಡಗೇರ ಹಾಗೂ ಯಾದಗಿರಿ ಗ್ರಾಮಾಂತರ ಠಾಣೆ ಪೊಲೀಸರು ಖಚಿತ ಮಾಹಿತಿ ಆಧರಿಸಿ ಜಂಟಿ ಕಾರ್ಯಾಚರಣೆ ನಡೆಸಿ ೪೦ ಕಿ.ಮೀ. ಚೇಸ್ ಮಾಡಿದರು.
ಜೆಸಿಬಿ ಅಡ್ಡಲಾಗಿಟ್ಟು ತಡೆ: ಆರೋಪಿಗಳು ವಾಹನ ನಿಲ್ಲಿಸದೆ ವೇಗ ಹೆಚ್ಚಿಸಿದಾಗ, ಯರಗೋಳ ಬಳಿ ರಸ್ತೆಗೆ ಅಡ್ಡಲಾಗಿ ಜೆಸಿಬಿ ಹಾಗೂ ಟ್ರ್ಯಾಕ್ಟರ್ ನಿಲ್ಲಿಸಿ ವಾಹನವನ್ನು ತಡೆಯಲಾಯಿತು. ರಭಸವಾಗಿ ಡಿಕ್ಕಿ ಹೊಡೆದ ಸ್ಕಾರ್ಪಿಯೋ ಜಖಂಗೊಂಡಿದ್ದು, ಆರೋಪಿಗಳನ್ನು ಸ್ಥಳದಲ್ಲೇ ವಶಕ್ಕೆ ಪಡೆಯಲಾಯಿತು.
ಬಂಧಿತ ಆರೋಪಿಗಳು:
ಹರಿಯಾಣ ಮೂಲದ ಸಮೂನ್, ಅನಿಬ್, ಇರ್ಷಾದ್, ನಪೀಸ್, ಅಜೀಮ್ ಹಾಗೂ ರಾಜಸ್ಥಾನ ಮೂಲದ ನಿತಿನ್ ಬಂಧಿತ ಕಳ್ಳರು.
ವಡಗೇರ ಸೇರಿದಂತೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಆರೋಪಿಗಳ ಹಿನ್ನೆಲೆ ಹಾಗೂ ಜಾಲದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸಾರ್ವಜನಿಕರು ಪೊಲೀಸರ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ.



