ಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ರಾಮಪುರದಲ್ಲಿ ಕುಡಿಯುವ ನೀರಿಗೆ ಭಾರಿ ಅಭಾವ: ಗ್ರಾಮ ಪಂಚಾಯಿತಿ ಮುಂಭಾಗ ಖಾಲಿ ಕೊಡ ಹಿಡಿದು ಗ್ರಾಮಸ್ಥರ ಬೃಹತ್ ಪ್ರತಿಭಟನೆ!

Share News

ಹನೂರು: ತಾಲೂಕಿನ ರಾಮಪುರ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲೇ ಕಳೆದ ಹಲವಾರು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದ್ದು, ಆಡಳಿತ ಮಂಡಳಿಯ ನಿರ್ಲಕ್ಷ್ಯ ಖಂಡಿಸಿ ರೊಚ್ಚಿಗೆದ್ದ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಖಾಲಿ ಬಿಂದಿಗೆಗಳನ್ನು ಹಿಡಿದು ಭಾರಿ ಪ್ರತಿಭಟನೆ ನಡೆಸಿದರು.

​ಗೌರಿ-ಗಣೇಶ ಹಬ್ಬದ ಸಾಲಿನಲ್ಲಿಯೇ ನೀರಿನ ಅಭಾವ ತೀವ್ರಗೊಂಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ಗ್ರಾಮ ಪಂಚಾಯಿತಿ, ತಾಲೂಕು ಆಡಳಿತ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

​ಮುಖ್ಯಾಂಶಗಳು:

​ಅನುದಾನದ ಕೊರತೆ ನೆಪ: ಸ್ಥಳಕ್ಕೆ ಭೇಟಿ ನೀಡಿದ ಪಿಡಿಒ (PIDO) ಪುಷ್ಪಲತಾ ಮಾತನಾಡಿ, “ಪಂಚಾಯಿತಿಯಲ್ಲಿ ಹೆಚ್ಚಿನ ಅನುದಾನವಿಲ್ಲದ ಕಾರಣ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ತೊಡಕಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ” ಎಂದು ಸಮಜಾಯಿಷಿ ನೀಡಿದರು.

​ಹಲವು ಗ್ರಾಮಗಳಲ್ಲಿ ಜಲಕ್ಷಾಮ: ರಾಮಪುರ ಮಾತ್ರವಲ್ಲದೆ ಪಂಚಾಯಿತಿ ವ್ಯಾಪ್ತಿಯ ಸಂಗನಪುರ, ಪಳನಿ ಮೇಡು ಹಾಗೂ ಗೆಜ್ಜಲನಾಥ ಗ್ರಾಮಗಳಲ್ಲಿಯೂ ತೀವ್ರ ನೀರಿನ ಅಭಾವವಿದೆ.

​ಗ್ರಾಮಸ್ಥರ ಆಗ್ರಹ: ಬಂದ್ ಆಗಿರುವ ಹಳೆಯ ಕೊಳವೆಬಾವಿಗಳನ್ನು ಮರು ಕೊರೆಯಿಸಿ (ರೀ-ಬೋರ್), ಹೊಸ ಮೋಟಾರ್ ಹಾಗೂ ಪೈಪ್‌ಲೈನ್ ಅಳವಡಿಸಿ ತಕ್ಷಣವೇ ಕುಡಿಯುವ ನೀರು ಪೂರೈಸಬೇಕು ಎಂದು ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಲಾಯಿತು.

​ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಮಪುರ ಪೊಲೀಸರು ಸ್ಥಳದಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ రాజೇಂದ್ರ, ಗಿರೀಶ್ ಸೇರಿದಂತೆ ನೂರಾರು ನಿವಾಸಿಗಳು ಭಾಗವಹಿಸಿದ್ದರು.

​ವರದಿ: ಶಾರೂಕ್ ಖಾನ್, ಪತ್ರಕರ್ತರು, ಹನೂರು


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!