ಮಾದಕ ವಸ್ತು ಮಾರಾಟ ಜಾಲ ಪತ್ತೆ; ಇಬ್ಬರ ಬಂಧನ, ಗಾಂಜಾ-MDMA ವಶ

ಬೆಳ್ತಂಗಡಿ : ಗುರುವಾಯನಕೆರೆಯ ಸರ್ಕಾರಿ ಪ್ರೌಢಶಾಲಾ ಮೈದಾನದ ಬಳಿ ಮಾದಕ ದ್ರವ್ಯ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದು, ಅವರಿಂದ ಗಾಂಜಾ ಹಾಗೂ ಎಂಡಿಎಂಎ (MDMA) ವಶಪಡಿಸಿಕೊಂಡಿದ್ದಾರೆ.
ಕುವೆಟ್ಟು ಗ್ರಾಮದ ಸುನ್ನತ್ ಕೆರೆ ನಿವಾಸಿ ತ್ವಲಹ್ ಅಲಿಯಾಸ್ ಅಜ್ಜರ್ ಅಲಿಯಾಸ್ ಅನ್ಸಾರ್ (21) ಹಾಗೂ ಪಿಲಿಚಂಡಿಕಲ್ಲು ನಿವಾಸಿ ಇಬ್ರಾಹಿಂ (29) ಬಂಧಿತ ಆರೋಪಿಗಳು.
ಘಟನೆಯ ವಿವರ:
ಶಾಲಾ ಮೈದಾನದ ಬಳಿಯ ಗುಡ್ಡಗಾಡು ಹಾಗೂ ಅರಣ್ಯ ಪ್ರದೇಶದಲ್ಲಿ ದ್ವಿಚಕ್ರ ವಾಹನಗಳ ಬಳಿ ನಾಲ್ವರು ವ್ಯಕ್ತಿಗಳು ಅನುಮಾನಾಸ್ಪದವಾಗಿ ನಿಂತಿರುವುದನ್ನು ಗಮನಿಸಿದ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಈ ವೇಳೆ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ ಗುಂಪನ್ನು ಬೆನ್ನಟ್ಟಿದ ಸಿಬ್ಬಂದಿ, ಇಬ್ಬರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಾದಕ ವಸ್ತು ಜಪ್ತಿ:
ಬಂಧಿತ ಅನ್ಸಾರ್ನಿಂದ ₹5,000 ಮೌಲ್ಯದ ಎಂಡಿಎಂಎ ಹಾಗೂ ಇಬ್ರಾಹಿಂ ಬಳಿಯಿಂದ 29 ಗ್ರಾಂ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಸ್ಥಳದಿಂದ ತಲೆಮರೆಸಿಕೊಂಡಿರುವ ಹಮ್ಜತ್ ಕರಾರ್ ಮತ್ತು ನೌಶಾದ್ ಎಂಬಿಬ್ಬರಿಗಾಗಿ ಬೆಳ್ತಂಗಡಿ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.



