5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ಆರೋಪಿ ಮಹಿಳೆ ಬಂಧನ

ಮಂಗಳೂರು: ಮನೆ ಕೆಲಸಕ್ಕೆ ನಿಂತು ಕಳವು ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 5 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮಹಿಳೆಯನ್ನು ಕಾವೂರು ಠಾಣೆ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಕಾಶ ಭವನದ ಆನಂದ ನಗರ ನಿವಾಸಿ ಲತಾ ಮಾರಿಯಾ (44) ಬಂಧಿತ ಆರೋಪಿ.
ಪ್ರಕರಣದ ವಿವರ:
ಕಾವೂರು ಪೊಲೀಸ್ ಠಾಣೆಯಲ್ಲಿ 2019ರಲ್ಲಿ ದಾಖಲಾಗಿದ್ದ ಮನೆ ಕೆಲಸದವರ ಕಳವು ಪ್ರಕರಣಕ್ಕೆ (ಅ.ಕ್ರ 33/2019 ಕಲಂ 381 IPC) ಸಂಬಂಧಿಸಿದಂತೆ ಮಂಗಳೂರಿನ ಹಿರಿಯ ಸಿಜೆ & ಸಿಜೆಎಂ ನ್ಯಾಯಾಲಯವು ಆರೋಪಿತೆ ವಿರುದ್ಧ ದಸ್ತಗಿರಿ ವಾರಂಟ್ (LPC No 05/2024) ಹೊರಡಿಸಿತ್ತು. ಆದರೆ ವಾರಂಟ್ ಜಾರಿಯಾದ ಮೇಲೆಯೂ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಎಲ್ಪಿಸಿ (Long Pending Case) ಆಗಿದ್ದರು.
ಪೊಲೀಸ್ ಕಾರ್ಯಾಚರಣೆ:
ವಿಶೇಷ ಕಾರ್ಯಾಚರಣೆ ನಡೆಸಿದ ಕಾವೂರು ಪೊಲೀಸ್ ಠಾಣಾ ಅಧಿಕಾರಿಗಳು ಹಾಗೂ ಸಿಬ್ಬಂದಿ, ಜ್ಯೋತಿ ನಗರದಲ್ಲಿದ್ದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಂಧಿತೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.



