ಪತಿ ವಿಡಿಯೋ ಕಾಲ್ ರಿಸೀವ್ ಮಾಡಿಲ್ಲವೆಂದು ಮನನೊಂದು ಪತ್ನಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ

ಮಹಬೂಬಾಬಾದ್ (ತೆಲಂಗಾಣ): ಪತಿ ವಿಡಿಯೋ ಕಾಲ್ ಸ್ವೀಕರಿಸಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಮನನೊಂದ 20 ವರ್ಷದ ವಿವಾಹಿತ ಮಹಿಳೆಯೊಬ್ಬರು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ತೆಲಂಗಾಣದ ಮಹಬೂಬಾಬಾದ್ನಲ್ಲಿ ನಡೆದಿದೆ.
ವಾರಂಗಲ್ ಜಿಲ್ಲೆಯ ನೆಕ್ಕೊಂಡ ಮಂಡಲದ ಬೊಳ್ಳಿಕೊಂಡ ಗ್ರಾಮದ ಅಖಿಲಾ (20) ಮೃತ ದುರ್ದೈವಿ. ಈಕೆಗೆ ಸುಮಾರು ಎರಡು ವರ್ಷಗಳ ಹಿಂದೆ ಮಹಬೂಬಾಬಾದ್ನ ಹೌಸಿಂಗ್ ಫೈನಾನ್ಸ್ ಮ್ಯಾನೇಜರ್ ಬನೋತ್ ಹುಸೇನ್ ಅವರೊಂದಿಗೆ ವಿವಾಹವಾಗಿದ್ದು, ದಂಪತಿಗೆ ಒಂದು ಚಿಕ್ಕ ಮಗುವಿದೆ.
ಘಟನೆಯ ವಿವರ:
ಇತ್ತೀಚೆಗೆ ಅಖಿಲಾ ತಮ್ಮ ತವರು ಮನೆಯಲ್ಲಿದ್ದರು. ಸೆಪ್ಟೆಂಬರ್ 2ರಂದು ಮಗು ಅಳುತ್ತಿದ್ದಾಗ, ಮಗುವನ್ನು ತಂದೆಯೊಂದಿಗೆ ಮಾತನಾಡಿಸಲು ಪತಿಗೆ ವಿಡಿಯೋ ಕಾಲ್ ಮಾಡಿದ್ದಾರೆ. ಆದರೆ ಹುಸೇನ್ ಕರೆ ಸ್ವೀಕರಿಸಿರಲಿಲ್ಲ. ಇದರಿಂದ ತೀವ್ರವಾಗಿ ಬೇಸರಗೊಂಡ ಅಖಿಲಾ, ತರುವಾಯ ಮಹಬೂಬಾಬಾದ್ನಲ್ಲಿರುವ ಅತ್ತೆ-ಮಾವನ ಮನೆಗೆ ವಾಪಸ್ ಬಂದು ಇಲಿ ಪಾಷಾಣ ಸೇವಿಸಿದ್ದಾರೆ.
ಚಿಕಿತ್ಸೆ ಫಲಿಸದೆ ಸಾವು:
ಅಖಿಲಾ ಅಸ್ವಸ್ಥಗೊಂಡಿರುವುದನ್ನು ಗಮನಿಸಿದ ಕುಟುಂಬಸ್ಥರು ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮುಂಜಾನೆ ಆಕೆ ಕೊನೆಯುಸಿರೆಳೆದಿದ್ದಾಳೆ.
ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಆತ್ಮಹತ್ಯೆಗೆ ಬೇರೆನಾದರೂ ಕಾರಣಗಳಿವೆಯೇ ಎಂಬ ಕುರಿತು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.



