ಬಂಗಾರಪೇಟೆ: ಪೋಕ್ಸೊ ಪ್ರಕರಣಗಳಲ್ಲಿ ಸಂತ್ರಸ್ತೆಯ ಗುರುತು ಬಹಿರಂಗಪಡಿಸದಂತೆ ಪೊಲೀಸ್ ಇಲಾಖೆ ಮನವಿ — ಎಸ್ಪಿ ಶಿವಾಂಶು ರಜಪೂತ್ ಎಚ್ಚರಿಕೆ

ಬಂಗಾರಪೇಟೆ (ಸೆ. 05): ಸೆಪ್ಟೆಂಬರ್ 02 ರಂದು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ BNSS-2023 ಹಾಗೂ ಪೋಕ್ಸೊ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಈಗಾಗಲೇ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಸಾಕ್ಷಿಗಳ ವಿಚಾರಣೆ, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಸೇರಿದಂತೆ ತನಿಖೆ ಪ್ರಗತಿಯಲ್ಲಿದೆ.
ಸಂತ್ರಸ್ತೆಯ ಗೌಪ್ಯತೆ ಕಾಯ್ದುಕೊಳ್ಳಲು ಸೂಚನೆ:
ಈ ಸೂಕ್ಷ್ಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಬಾಲಕಿಯ ಹೆಸರು, ಫೋಟೋ, ವಿಳಾಸ, ಶಾಲೆ, ಕುಟುಂಬದ ವಿವರಗಳು ಅಥವಾ ಆಕೆಯನ್ನು ಗುರುತಿಸುವಂತಹ ಯಾವುದೇ ಮಾಹಿತಿಯನ್ನು ಸಾರ್ವಜನಿಕರು ಹಾಗೂ ಮಾಧ್ಯಮಗಳು ಬಹಿರಂಗಪಡಿಸಬಾರದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ (SP) ಶಿವಾಂಶು ರಜಪೂತ್ ಮನವಿ ಮಾಡಿದ್ದಾರೆ. ಬಾಲಕಿಯ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳುವುದು ಕಾನೂನುಬಾಹಿರವಾಗಿದ್ದು, ಆಕೆಯ ಗೌಪ್ಯತೆ ಹಾಗೂ ಘನತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
ಕಾನೂನು ಕ್ರಮದ ಎಚ್ಚರಿಕೆ:
ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಂ, ಯೂಟ್ಯೂಬ್ ಹಾಗೂ ಯಾವುದೇ ಮಾಧ್ಯಮಗಳಲ್ಲಿ ಸಂತ್ರಸ್ತೆಯ ಗುರುತು ಬಹಿರಂಗಪಡಿಸಿದರೆ ಸಂಬಂಧಪಟ್ಟವರ ವಿರುದ್ಧ ಜೆ.ಜೆ ಆಕ್ಟ್ (JJ Act) ಹಾಗೂ ಪೋಕ್ಸೊ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಅಲ್ಲದೆ, ಧೃಡೀಕರಣವಿಲ್ಲದೆ ಶಂಕಿತರ ಫೋಟೋಗಳನ್ನು ಪ್ರಕಟಿಸುವುದು, ಊಹಾಪೋಹ ಹಾಗೂ ವದಂತಿಗಳನ್ನು ಹರಡಿ ಗೊಂದಲ ಸೃಷ್ಟಿಸುವವರ ಮೇಲೆಯೂ ಗಂಭೀರ ಕ್ರಮ ಕೈಗೊಳ್ಳಲಾಗುವುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಅಥವಾ ಸಾಕ್ಷ್ಯಗಳಿದ್ದಲ್ಲಿ ಬಂಗಾರಪೇಟೆ ಪೊಲೀಸ್ ಠಾಣೆ ಅಥವಾ ಎಸ್ಪಿ ಕಚೇರಿಗೆ ನೀಡುವಂತೆ ಕೋರಿದ್ದು, ಇಲಾಖೆಯಿಂದಲೇ ಅಧಿಕೃತ ಮಾಹಿತಿಗಳನ್ನು ಪ್ರಕಟಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.



