ಕಡವೆ ಬೇಟೆ: ಅರಣ್ಯ ಸಿಬ್ಬಂದಿ ಕಂಡು ನಾಲ್ವರು ಆರೋಪಿಗಳು ಪರಾರಿ

ಹನೂರು: ಮಲೆ ಮಹದೇಶ್ವರ ವನ್ಯಜೀವಿಧಾಮದ ಬಫರ್ ವಲಯಕ್ಕೆ ಸೇರಿದ ಉಡುತೊರೆಹಳ್ಳ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ನಾಡಬಂದೂಕಿನಿಂದ ಕಡವೆಯನ್ನು ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳು, ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿಯನ್ನು ಕಂಡು ಪರಾರಿಯಾದ ಘಟನೆ ನಡೆದಿದೆ.
ಉಡುತೊರೆಹಳ್ಳ ಡ್ಯಾಂ ಗೇಟ್ ಬಳಿ ಉಪ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ರಾತ್ರಿ ವೇಳೆ ಗಸ್ತು ನಿರತರಾಗಿದ್ದಾಗ, ಬಂದೂಕು ಮತ್ತು ಚೀಲಗಳನ್ನು ಹೊತ್ತು ಬರುತ್ತಿದ್ದ ನಾಲ್ವರು ಶಂಕಾಸ್ಪದ ವ್ಯಕ್ತಿಗಳು ಕಂಡುಬಂದಿದ್ದಾರೆ. ಸಿಬ್ಬಂದಿಯನ್ನು ಗಮನಿಸಿದ ತಕ್ಷಣ ಆರೋಪಿಗಳು ಚೀಲಗಳನ್ನು ಸ್ಥಳದಲ್ಲೇ ಬಿಟ್ಟು ಕತ್ತಲಲ್ಲಿ ಓಡಿ ಪರಾರಿಯಾಗಿದ್ದಾರೆ. ಸಿಬ್ಬಂದಿ ಸ್ಥಳವನ್ನು ತಪಾಸಣೆ ನಡೆಸಿದಾಗ ಮೂರು ಭಾಗಗಳಾಗಿ ಕತ್ತರಿಸಲಾಗಿದ್ದ ಕಡವೆಯ ದೇಹದ ಮಾಂಸ ಪತ್ತೆಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ವನ್ಯಜೀವಿ ಅಪರಾಧ ವರದಿ (WLOR) ದಾಖಲಿಸಿಕೊಳ್ಳಲಾಗಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಶ್ವಾನದಳದ ನೆರವಿನಿಂದ ತೀವ್ರ ಶೋಧ ಕಾರ್ಯ ಮುಂದುವರಿದಿದೆ. ಪ್ರಭಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿರಾಜ್ ಶ್ರೀಕಾಂತ್ ಹೊಸೂರು ಅವರ ಮಾರ್ಗದರ್ಶನದಲ್ಲಿ, ವಲಯ ಅರಣ್ಯಾಧಿಕಾರಿ ಮಹೇಶ್ ಹೆಚ್.ಎನ್. ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ನಂದೀಶ್ ಎಸ್.ಬಿ. ಹಾಗೂ ಅರಣ್ಯ ಸಿಬ್ಬಂದಿ ಭಾಗವಹಿಸಿದ್ದರು.



