ಕೃಷಿ ಅಧಿಕಾರಿ ಹುದ್ದೆ ನೇಮಕಾತಿ ನಿಯಮ ತಿದ್ದುಪಡಿಗೆ ಆಗ್ರಹ: ಧಾರವಾಡ ಕೃಷಿ ವಿವಿ ವಿದ್ಯಾರ್ಥಿಗಳಿಂದ ಉಪವಾಸ ಸತ್ಯಾಗ್ರಹ, ಹೋರಾಟ 21ನೇ ದಿನಕ್ಕೆ

ಧಾರವಾಡ: ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿ ನಿಯಮ ತಿದ್ದುಪಡಿಗೆ ಆಗ್ರಹಿಸಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟ ಇಂದಿಗೆ 21ನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರದಿಂದ ಯಾವುದೇ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಇದೀಗ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಇತರೆ ಇಲಾಖೆ ಹಾಗೂ ವಿಭಿನ್ನ ಪದವೀಧರರಿಗೆ ಅವಕಾಶ ನೀಡಿರುವುದನ್ನು ಕೃಷಿ ವಿವಿ ವಿದ್ಯಾರ್ಥಿಗಳು ತೀವ್ರವಾಗಿ ಖಂಡಿಸಿದ್ದಾರೆ. ಸರ್ಕಾರದ ಈ ನಿರ್ಧಾರವನ್ನು ತಕ್ಷಣವೇ ಹಿಂಪಡೆಯಬೇಕು ಹಾಗೂ ಕೃಷಿ ಪದವೀಧರರಿಗೆ ಮಾತ್ರ ಮೊದಲ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ವಿಶ್ವವಿದ್ಯಾಲಯದ ಮುಖ್ಯ ಪ್ರವೇಶ ದ್ವಾರ ಹಾಗೂ ಆಡಳಿತ ಭವನದ ಮುಂಭಾಗದಲ್ಲಿ ಧರಣಿ ಮುಂದುವರಿಸಿದ್ದಾರೆ.
ಆರಂಭದಲ್ಲಿ ಸಾಂಕೇತಿಕ ಧರಣಿಗೆಷ್ಟೇ ಸೀಮಿತವಾಗಿದ್ದ ಈ ಪ್ರತಿಭಟನೆ, ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದಾಗಿ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ರಾಜ್ಯ ಸರ್ಕಾರ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ವಿದ್ಯಾರ್ಥಿನಿ ಅಸ್ವಸ್ಥ:
ಉಪವಾಸ ಸತ್ಯಾಗ್ರಹದ ಹಿನ್ನೆಲೆಯಲ್ಲಿ ಮುಂಜಾನೆ ಆಹಾರ ಸೇವಿಸದೆ ಅಹೋರಾತ್ರಿ ಧರಣಿಯಲ್ಲಿ ಕುಳಿತಿದ್ದ ಓರ್ವ ವಿದ್ಯಾರ್ಥಿನಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ವೈದ್ಯರ ತಂಡ ವಿದ್ಯಾರ್ಥಿನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದೆ.
ಹೆಚ್ಚಿದ ಆಕ್ರೋಶ – ಎಚ್ಚರಿಕೆ:
“ಕೃಷಿ ಅಧಿಕಾರಿ ನೇಮಕಾತಿಯಲ್ಲಿ ಇತರೆ ಪದವೀಧರರಿಗೆ ನೀಡಿರುವ ಅವಕಾಶವನ್ನು ಸರ್ಕಾರ ತಕ್ಷಣವೇ ಕೈಬಿಡಬೇಕು. ಕೃಷಿ ವಿಷಯದಲ್ಲೇ ವಿಶೇಷ ಪದವಿ ಪಡೆದ ನಮಗೆ ಮೊದಲ ಆದ್ಯತೆ ಸಿಗಬೇಕು. ನಮ್ಮ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಈ ಕೂಡಲೇ ಈಡೇರಿಸದಿದ್ದರೆ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು” ಎಂದು ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ.



