ವೈಟ್‌ಫೀಲ್ಡ್ ಪೊಲೀಸರ ಭರ್ಜರಿ ಕಾರ್ಯಾಚರಣೆ: ಕಳುವಾಗಿದ್ದ ₹2.72 ಕೋಟಿ ಮೌಲ್ಯದ 1,119 ಮೊಬೈಲ್ ಪತ್ತೆ, ಮಾಲೀಕರಿಗೆ ಹಸ್ತಾಂತರ!

ಬೆಂಗಳೂರು: ವೈಟ್‌ಫೀಲ್ಡ್ ವಿಭಾಗದ ಪೊಲೀಸರು ನಡೆಸಿದ ಸತತ ಒಂದು ತಿಂಗಳ ಸುದೀರ್ಘ ಕಾರ್ಯಾಚರಣೆಯಲ್ಲಿ, ಕಳುವಾಗಿದ್ದ ಒಟ್ಟು 1,119 ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿ ಅವುಗಳ ನೈಜ ಮಾಲೀಕರಿಗೆ ಯಶಸ್ವಿಯಾಗಿ ಹಿಂತಿರುಗಿಸಲಾಗಿದೆ.
ಪತ್ತೆಯಾದ ಮೊಬೈಲ್‌ಗಳ ಒಟ್ಟು ಮೌಲ್ಯ ಅಂದಾಜು ₹2 ಕೋಟಿ 72 ಲಕ್ಷ ಎಂದು ತಿಳಿದುಬಂದಿದೆ.
ವೈಟ್‌ಫೀಲ್ಡ್ ವಿಭಾಗದ 10 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡ ಹಾಗೂ ಕಳುವಾದ ಕುರಿತು ಸಿಇಐಆರ್ (CEIR) ಪೋರ್ಟಲ್‌ನಲ್ಲಿ ಸಾರ್ವಜನಿಕರು ದಾಖಲಿಸಿದ್ದ ದೂರುಗಳನ್ನು ಆಧರಿಸಿ ತನಿಖೆ ಕೈಗೆತ್ತಿಕೊಳ್ಳಲಾಗಿತ್ತು. ಇದಕ್ಕಾಗಿ 15 ಪೊಲೀಸ್ ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.
ಈ ತಂಡವು ತಂತ್ರಜ್ಞಾನದ ನೆರವಿನಿಂದ ಬೆಂಗಳೂರು ನಗರ ಮಾತ್ರವಲ್ಲದೆ ಹೊರ ರಾಜ್ಯಗಳಿಗೂ ತೆರಳಿ ನಿರಂತರವಾಗಿ ಜಾಲ ಬೀಸಿ, ಕಳುವಾಗಿದ್ದ 1,119 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಸಫಲವಾಗಿದೆ.
ಕಳೆದುಹೋಗಿದ್ದ ಅಥವಾ ಕಳುವಾಗಿದ್ದ ಮೊಬೈಲ್‌ಗಳು ಮತ್ತೆ ಕೈಸೇರುವ ಭರವಸೆಯನ್ನೇ ಕಳೆದುಕೊಂಡಿದ್ದ ಮಾಲೀಕರು, ಪೊಲೀಸರ ಈ ಶ್ರಮ ಹಾಗೂ ವೇಗದ ಕಾರ್ಯಾಚರಣೆಗೆ ಪ್ರಶಂಸೆ ವ್ಯಕ್ತಪಡಿಸಿ ಧನ್ಯವಾದ ಅರ್ಪಿಸಿದ್ದಾರೆ. CEIR ತಂತ್ರಜ್ಞಾನ ಹಾಗೂ ಪೊಲೀಸರ ನಿರಂತರ ಶ್ರಮಕ್ಕೆ ಈ ಕಾರ್ಯಾಚರಣೆ ಸಾಕ್ಷಿಯಾಗಿದೆ.



