ಟ್ರೆಂಡಿಂಗ್ ಸುದ್ದಿಗಳುಕ್ರೈಂ ಸುದ್ದಿಜಿಲ್ಲಾ ಸುದ್ದಿತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಪತ್ರಕರ್ತರ ಸೋಗಿನಲ್ಲಿ ಬ್ಲ್ಯಾಕ್‌ಮೇಲ್: ಗಾಂಜಾ ನೀಡಿ ವಿಡಿಯೋ ಮಾಡಿ ಸುಲಿಗೆ ಮಾಡುತ್ತಿದ್ದ 4 ಯೂಟ್ಯೂಬರ್‌ಗಳ ಬಂಧನ

Share News

(ಬೆಳಗಾವಿ): ಮಾಧ್ಯಮ ಪ್ರತಿನಿಧಿಗಳು ಹಾಗೂ ಪತ್ರಕರ್ತರೆಂದು ಹೇಳಿಕೊಂಡು ಸಾರ್ವಜನಿಕರನ್ನು ಬೆದರಿಸಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡುತ್ತಿದ್ದ ಖತರ್ನಾಕ್ ಯೂಟ್ಯೂಬರ್‌ಗಳ ಜಾಲವನ್ನು ಹುಕ್ಕೇರಿ ತಾಲೂಕು ಪೊಲೀಸರು ಭೇದಿಸಿದ್ದಾರೆ. ಗಾಂಜಾ ಪ್ಯಾಕೆಟ್ ನೀಡಿ ರಹಸ್ಯವಾಗಿ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

​ತಾಲೂಕಿನ ಕೊಟಬಾಗಿ ಗ್ರಾಮದ ಮೆಹಬೂಬ್ ಜಮಾದಾರ್ ಎಂಬುವವರನ್ನು ಗುರಿಯಾಗಿಸಿಕೊಂಡಿದ್ದ ಆರೋಪಿಗಳು, ಸಿನಿಮೀಯ ಶೈಲಿಯಲ್ಲಿ ಸಂಚು ರೂಪಿಸಿದ್ದರು. ಮೊದಲು ಮೆಹಬೂಬ್ ಅವರಿಗೆ ತಾವೇ ಗಾಂಜಾ ಪ್ಯಾಕೆಟ್ ನೀಡಿ, ಅದನ್ನು ಪಡೆಯುವ ದೃಶ್ಯವನ್ನು ಸ್ಪೈ ಕ್ಯಾಮೆರಾದಲ್ಲಿ ರಹಸ್ಯವಾಗಿ ಸೆರೆಹಿಡಿದಿದ್ದರು.

​ಬಳಿಕ ತಾವು ಪ್ರಭಾವಿ ಪತ್ರಕರ್ತರು ಹಾಗೂ ಪೊಲೀಸರ ನಿಕಟ ಸಂಪರ್ಕದಲ್ಲಿರುವವರೆಂದು ಹೇಳಿಕೊಂಡು, “ನೀನು ಗಾಂಜಾ ದಂಧೆ ಮಾಡುತ್ತಿರುವುದು ವೀಡಿಯೋದಲ್ಲಿದೆ. ನಿನ್ನ ವಿರುದ್ಧ ಪೊಲೀಸ್ ಕೇಸ್ ಮಾಡಿಸುತ್ತೇವೆ” ಎಂದು ಬೆದರಿಕೆಯೊಡ್ಡಿದ್ದರು. ಈ ದೃಶ್ಯವನ್ನು ಸಾಮಾಜಿಕ ಜಾಲತಾಣ ಹಾಗೂ ಯೂಟ್ಯೂಬ್‌ನಲ್ಲಿ ಹರಿಬಿಡುವುದಾಗಿ ಬೆದರಿಸಿ ಭಾರಿ ಮೊತ್ತದ ಹಣಕ್ಕೆ ಬೇಡಿಕೆಯಿಟ್ಟಿದ್ದರು.

​ಆರೋಪಿಗಳ ಬೆದರಿಕೆಗೆ ಹೆದರಿದ ಮೆಹಬೂಬ್ ಜಮಾದಾರ್ ಆರಂಭದಲ್ಲಿ ಒಂದಷ್ಟು ಹಣ ನೀಡಿದ್ದರೂ, ಆರೋಪಿಗಳ ದುರಾಸೆ ತೀರದೆ ಮತ್ತೆ ನಿರಂತರವಾಗಿ ಹಣಕ್ಕೆ ಒತ್ತಡ ಹೇರಿದ್ದಾರೆ. ಹೆಚ್ಚುವರಿ ಹಣ ಕೊಡದಿದ್ದಾಗ ಆರೋಪಿಗಳು ಸದರಿ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದರು.

​ಇದರಿಂದ ತೀವ್ರ ಕಂಗೆಟ್ಟ ಸಂತ್ರಸ್ತ ಮೆಹಬೂಬ್ ತಕ್ಷಣವೇ ಹುಕ್ಕೇರಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ನಾಲ್ವರನ್ನೂ ಕಂಬಿ ಎಣಿಸುವಂತೆ ಮಾಡಿದ್ದಾರೆ.

​ಬಂಧಿತರಿಂದ ಕೃತ್ಯಕ್ಕೆ ಬಳಸಲಾಗಿದ್ದ ಕಾರು, ಮೊಬೈಲ್ ಫೋನ್‌ಗಳು ಹಾಗೂ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!