ಕೆಜಿಎಫ್ ಬೇತಾಳ ದೇವಾಲಯಕ್ಕೆ ಬೀಗ – ವಂಚನೆ ಆರೋಪದ ಬೆನ್ನಲ್ಲೇ ಭಾರಿ ಪೊಲೀಸ್ ಕಾರ್ಯಾಚರಣೆ – ಚಂದ್ರನಾಥ್ ಅಘೋರಿ ಬಂಧನ

ಅಕ್ರಮ ನಿರ್ಮಾಣ – ಮೂಢನಂಬಿಕೆ ಹೆಸರಿನಲ್ಲಿ ಲಕ್ಷಾಂತರ ರೂ. ವಸೂಲಿ ಆರೋಪ
ಬಂಗಾರಪೇಟೆ ; ಕೆಜಿಎಫ್ ತಾಲ್ಲೂಕಿನ ಐವಾರಹಳ್ಳಿ ಸಮೀಪದಲ್ಲಿರುವ ಬೇತಾಳ ದೇವಾಲಯದ ಮೇಲೆ ಪೊಲೀಸರು ಮಂಗಳವಾರ ಭಾರಿ ಕಾರ್ಯಾಚರಣೆ ನಡೆಸಿ ದೇವಾಲಯವನ್ನು ಮುಚ್ಚಿಸಿದ್ದಾರೆ. ಅಕ್ರಮವಾಗಿ ದೇವಾಲಯ ನಿರ್ಮಿಸಿರುವುದು ಹಾಗೂ ಸಾರ್ವಜನಿಕರನ್ನು ವಂಚಿಸುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಕಾರ್ಯಾಚರಣೆಯ ವೇಳೆ ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ದೇವಾಲಯದ ಮುಖ್ಯ ದ್ವಾರಕ್ಕೆ ಬೀಗ ಜಡಿದು, ಅಲ್ಲಿದ್ದ ಭಕ್ತರನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಸುರಕ್ಷಿತವಾಗಿ ವಾಪಸ್ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲ್ಪಟ್ಟ ಚಂದ್ರನಾಥ್ ಅಘೋರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕಂಗಾಂಡ್ಲಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ವೈಶಾಲಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.
ದೂರಿನ ಪ್ರಕಾರ, ದೇವಾಲಯದಲ್ಲಿ ದೆವ್ವ ಬಿಡಿಸುವುದು, ಮಾಟ-ಮಂತ್ರ ನಿವಾರಣೆ, ಮದ್ಯದ ಚಟ ಬಿಡಿಸುವುದು ಸೇರಿದಂತೆ ವಿವಿಧ ನೆಪಗಳಲ್ಲಿ ಜನರನ್ನು ನಂಬಿಸಿ ಸಾವಿರಾರು ರೂಪಾಯಿ ಹಣ ವಸೂಲಿ ಮಾಡಲಾಗುತ್ತಿತ್ತು. ವಿಶೇಷವಾಗಿ ಮಹಿಳೆಯರಿಗೆ ಮಾನಸಿಕ ಕಿರುಕುಳ ನೀಡಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಇದೇ ವೇಳೆ, 108 ಅಡಿ ಎತ್ತರದ ಬೇತಾಳ ಮೂರ್ತಿಯನ್ನು ನಿರ್ಮಿಸಿ ಭಕ್ತರನ್ನು ಆಕರ್ಷಿಸುವ ಮೂಲಕ ಹಣ ಸಂಗ್ರಹಿಸಲಾಗಿದೆ ಎಂಬ ಆರೋಪಗಳನ್ನೂ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಅಮಾವಾಸ್ಯೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದ ನೂರಾರು ಭಕ್ತರು ದೇವಾಲಯಕ್ಕೆ ಆಗಮಿಸಿದ್ದರೂ, ಪೊಲೀಸ್ ಕಾರ್ಯಾಚರಣೆಯಿಂದ ಅವರಿಗೆ ಪ್ರವೇಶ ನಿರಾಕರಿಸಲಾಯಿತು.
ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು, ಹಣಕಾಸು ವ್ಯವಹಾರಗಳು ಹಾಗೂ ದೇವಾಲಯ ನಿರ್ಮಾಣದ ಕಾನೂನುಬದ್ಧತೆ ಸೇರಿದಂತೆ ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಹತ್ವದ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.
ಕೆಜಿಎಫ್ ತಾಲ್ಲೂಕು ಕ್ಯಾಸಂಬಳ್ಳಿ ಹೋಬಳಿಯ ಐವಾರಹಳ್ಳಿ ಗ್ರಾಮದಲ್ಲಿ “ಬೇತಾಳ ಮಹಾಶಕ್ತಿ ಪೀಠ” ಹೆಸರಿನಲ್ಲಿ ದೇವರು ಮತ್ತು ಮೂಢನಂಬಿಕೆಯ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದ ಚಂದ್ರ ಅಲಿಯಾಸ್ ಚಂದ್ರಬಾಬು ಹಾಗೂ ಆತನ ಸಹಚರರಾದ ಚಿನ್ನ, ಬಾಬು, ಶಂಕರಪ್ಪ, ಮುನಿವೆಂಕಟರೆಡ್ಡಿ, ಭಾಸ್ಕರ್ ಮತ್ತು ಸಂತೋಷ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ದೇವರು ಬಿಡಿಸುವುದು, ಕೆಟ್ಟ ಗಾಳಿ ಹೋಗಿಸುವುದು, ರೋಗಗಳಿಗೆ ಚಿಕಿತ್ಸೆ ನೀಡುವುದಾಗಿ ಹೇಳಿ ಮಹಿಳೆಯರ ಮೇಲೆ ಅಮಾನವೀಯ ಕೃತ್ಯಗಳನ್ನು ಎಸಗುತ್ತಿದ್ದರು. ಖಚಿತ ವೈದ್ಯಕೀಯ ಅರ್ಹತೆ ಇಲ್ಲದೇ ಚಿಕಿತ್ಸೆ ನೀಡುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದರು.
ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿ, ಕರ್ನಾಟಕ ಅಮಾನವೀಯ ಅಂಧಶ್ರದ್ಧೆ ಮತ್ತು ಕಪ್ಪು ಮ್ಯಾಜಿಕ್ ನಿಷೇಧ ಕಾಯ್ದೆ ಹಾಗೂ ಬಿಎನ್ಎಸ್-2023ರಡಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲಿದ್ದ ಆರು ಮಹಿಳೆಯರನ್ನು ರಕ್ಷಿಸಿ ಅವರ ಕುಟುಂಬಗಳಿಗೆ ಒಪ್ಪಿಸಲಾಗಿದೆ.




