ಪತ್ನಿಯಿಂದಲೇ ಅರಿವಳಿಕೆ ತಜ್ಞ ವೈದ್ಯನ ಬರ್ಬರ ಹತ್ಯೆ; 8 ವರ್ಷದ ಪುತ್ರನ ಮೇಲೂ ಚಾಕು ದಾಳಿ ನಡೆಸಿದ ಆರೋಪಿ ಬಂಧನ

ಧಾರವಾಡ: ಬೆಚ್ಚಿಬೀಳಿಸುವ ಕೌಟುಂಬಿಕ ದುರಂತವೊಂದರಲ್ಲಿ ಖಾಸಗಿ ಆಸ್ಪತ್ರೆಯ ಅರಿವಳಿಕೆ (ಅನಸ್ಥೀಷಿಯಾ) ತಜ್ಞ ವೈದ್ಯರೊಬ್ಬರನ್ನು ಅವರ ಪತ್ನಿಯೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ಬುಧವಾರ ಸಂಜೆ ಧಾರವಾಡ ನಗರದ ಬಾರಾಕೊಟ್ರಿಯ ರಂಕಾ ಸ್ಟೆಲ್ಲೊ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.
ಖಾಸಗಿ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಕಿರಣ್ ಕೊಲೆಯಾದ ದುರ್ದೈವಿ. ಹತ್ಯೆಯ ಬಳಿಕ ಆರೋಪಿ ಪ್ರಿಯಾಂಕಾ ತನ್ನ 8 ವರ್ಷದ ಪುತ್ರನ ಮೇಲೂ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ. ಗಂಭೀರವಾಗಿ ಗಾಯಗೊಂಡಿರುವ ಬಾಲಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ ಬಾಲಕನ ಸ್ಥಿತಿ ಆತಂಕಕಾರಿಯಾಗಿದೆ ಎಂದು ತಿಳಿದುಬಂದಿದೆ.
ಪೊಲೀಸ್ ಕಮಿಷನರ್ ಭೇಟಿ, ಆರೋಪಿ ವಶಕ್ಕೆ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಹಾಗೂ ಉಪನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಘಟನಾ ಸ್ಥಳದಲ್ಲೇ ಇದ್ದ ಆರೋಪಿ ಪತ್ನಿ ಪ್ರಿಯಾಂಕಾಳನ್ನು ಪೊಲೀಸರು ತಕ್ಷಣವೇ ವಶಕ್ಕೆ ಪಡೆದು ಬಂಧಿಸಿದ್ದಾರೆ.
ಕೊಲೆಗೆ ಕೌಟುಂಬಿಕ ಕಲಹವೇ ಕಾರಣ?
ಮೃತ ಡಾ. ಕಿರಣ್ ಅವರು ಪತ್ನಿ ಪ್ರಿಯಾಂಕಾ ಹಾಗೂ ಪುತ್ರನೊಂದಿಗೆ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದರು. ಪ್ರಾಥಮಿಕ ತನಿಖೆಯ ಪ್ರಕಾರ, ದಂಪತಿಗಳ ನಡುವಿನ ತೀವ್ರ ಕೌಟುಂಬಿಕ ಕಲಹವೇ ಈ ಭೀಕರ ಕೃತ್ಯಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೆ ನಿಖರವಾದ ಕಾರಣವೇನು ಎಂಬ ಕುರಿತು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.



