ಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ನಿಸ್ವಾರ್ಥ ಸೇವೆಗೆ ಒಲಿದ ಪ್ರತಿಫಲ; ಗಾಯಕಿ ಎಸ್. ಜಾನಕಿ ಸಾಕುಮಗನ ಹೆಸರಿಗೆ ಕೋಟ್ಯಂತರ ರೂ. ಆಸ್ತಿ ವಿಲ್!

Share News

ಮೈಸೂರು: “ನಿಸ್ವಾರ್ಥ ಸೇವೆಯ ಫಲ ಯಾವಾಗಲೂ ವ್ಯರ್ಥವಾಗುವುದಿಲ್ಲ, ಅದು ಅರ್ಹರನ್ನು ತಲುಪೇ ತೀರುತ್ತದೆ” ಎನ್ನುವುದಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಒಂದು ಅಪರೂಪದ ಹಾಗೂ ಜ್ವಲಂತ ನಿದರ್ಶನ ಬೆಳಕಿಗೆ ಬಂದಿದೆ. ಖ್ಯಾತ ಬಹುಭಾಷಾ ಗಾಯಕಿ ಎಸ್. ಜಾನಕಿ ಅವರು ತಮ್ಮ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯಲ್ಲಿ ಒಂದು ದೊಡ್ಡ ಪಾಲನ್ನು ತಮ್ಮನ್ನು ಮಗನಿಗಿಂತ ಹೆಚ್ಚಾಗಿ ನೋಡಿಕೊಂಡ ಸಾಕುಮಗ ನವೀನ್ ಹೆಸರಿಗೆ ಸದ್ದಿಲ್ಲದೆ ವಿಲ್ (ಖಾಸಗಿ ಮೃತ್ಯುಪತ್ರ) ಬರೆದಿಟ್ಟಿರುವ ಧನ್ಯತಾ ಘಟನೆ ವರದಿಯಾಗಿದೆ.

​೩೦ ವರ್ಷಗಳ ಸುದೀರ್ಘ ನಿಸ್ವಾರ್ಥ ಸೇವೆ:

ತಮ್ಮ ಮಗ ಮುರುಳಿಕೃಷ್ಣ ಅವರ ಅಕಾಲಿಕ ನಿಧನದ ನಂತರ ತೀವ್ರವಾಗಿ ವಿಚಲಿತರಾಗಿದ್ದ ಗಾಯಕಿ ಎಸ್. ಜಾನಕಿ ಅವರು, ಕೊನೆಯ ದಿನಗಳಲ್ಲಿ ನೆಮ್ಮದಿಯನ್ನು ಅರಸಿ ಮೈಸೂರಿಗೆ ಬಂದು ನೆಲೆಸಿದ್ದರು. ಈ ಕಠಿಣ ದಿನಗಳಲ್ಲಿ ಅವರ ನೆರಳಾಗಿ ನಿಂತು, ಅವರ ಪ್ರತಿಯೊಂದು ಬೇಕು-ಬೇಡಗಳನ್ನು ಅರಿತು ಹೆತ್ತ ಮಗನಿಗಿಂತಲೂ ಮಿಗಿಲಾಗಿ ಉಪಚರಿಸಿದವರು ನವೀನ್. ಬಾಲಕನಾಗಿದ್ದಾಗಲೇ ಜಾನಕಮ್ಮ ಅವರ ಕಂಠಸಿರಿಗೆ ಮನಸೋತು ಊರು ಬಿಟ್ಟು ಚೆನ್ನೈಗೆ ಹೋಗಿದ್ದ ನವೀನ್, ಕಳೆದ ೩೦ ವರ್ಷಗಳಿಂದ ಅವರೊಂದಿಗೆ ಸುದೀರ್ಘ ಅವಧಿಯನ್ನು ಕಳೆದಿದ್ದಾರೆ. ಇವರಿಬ್ಬರ ನಡುವಿನ ಬಾಂಧವ್ಯ ಅಮ್ಮ-ಮಗನ ಪವಿತ್ರ ಸಂಬಂಧವನ್ನು ಮೀರಿದ್ದಾಗಿತ್ತು.

ಎಸ್. ಜಾನಕಿ ಅವರು ತಮ್ಮ ಜೀವಮಾನವಿಡೀ ಕಷ್ಟಪಟ್ಟು ದುಡಿದು ಗಳಿಸಿದ ಕೋಟ್ಯಂತರ ರೂಪಾಯಿ ಆಸ್ತಿ ಕಣ್ಣಮುಂದಿದ್ದರೂ, ನವೀನ್ ಎಂದೂ ಅದಕ್ಕೆ ಆಸೆ ಪಟ್ಟವರಲ್ಲ. ಮೈಸೂರಿನಲ್ಲಿದ್ದಾಗಲೂ ಜಾನಕಮ್ಮನವರ ಸೇವೆಯನ್ನು ಮುಂದುವರಿಸಿದ್ದ ನವೀನ್, ಇಷ್ಟು ವರ್ಷಗಳ ಕಾಲ ಒಂದು ದಿನವೂ ಸಂಬಳ ಅಥವಾ ಸಂಭಾವನೆಯ ರೂಪದಲ್ಲಿ ನಯಾಪೈಸೆಯನ್ನೂ ಕೇಳಿರಲಿಲ್ಲ. ಯಾವುದೇ ಅಪೇಕ್ಷೆಯಿಲ್ಲದೆ ಪ್ರಾಮಾಣಿಕವಾಗಿ ತಾಯಿಯಂತೆ ನೋಡಿಕೊಂಡ ನವೀನ್ ಅವರ ಈ ನಿಸ್ವಾರ್ಥ ಗುಣ ಗಾಯಕಿಯ ಮನ ಮುಟ್ಟಿಸಿತ್ತು.

ತಮ್ಮ ಒಳಿತಿಗಾಗಿ ಇಡೀ ಜೀವನವನ್ನೇ ಮುಡುಪಾಗಿಟ್ಟ ನವೀನ್‌ಗೆ ನ್ಯಾಯಯುತವಾಗಿ ಸಲ್ಲಬೇಕಾದ ಸ್ಥಾನ ಹಾಗೂ ಆರ್ಥಿಕ ಭದ್ರತೆಯನ್ನು ನೀಡಲು ನಿರ್ಧರಿಸಿದ ಎಸ್. ಜಾನಕಿ ಅವರು, ಆತನ ಗಮನಕ್ಕೆ ತರದೆ ಸದ್ದಿಲ್ಲದೆ ತಮ್ಮ ಕೋಟ್ಯಂತರ ಆಸ್ತಿಯಲ್ಲಿ ಒಂದು ದೊಡ್ಡ ಪಾಲನ್ನು ನವೀನ್ ಹೆಸರಿಗೆ ಬರೆದಿಟ್ಟಿದ್ದಾರೆ. ಸ್ವತಃ ಈ ವಿಲ್ ಮಾಡಿರುವ ವಿಷಯ ನವೀನ್ ಅವರಿಗೇ ತಿಳಿದಿರಲಿಲ್ಲ ಎನ್ನಲಾಗಿದೆ.

​ಯಾವುದೇ ಸ್ವಾರ್ಥವಿಲ್ಲದೆ ಕೇವಲ ಪ್ರೀತಿ ಮತ್ತು ಭಕ್ತಿಯಿಂದ ಸೇವೆ ಸಲ್ಲಿಸಿದ ನವೀನ್ ಅವರಿಗೆ ಒಲಿದಿರುವ ಈ ಪ್ರತಿಫಲವು ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆಗೆ ಪಾತ್ರವಾಗಿದ್ದು, “ಪ್ರಾಮಾಣಿಕತೆಗೆ ಸಿಕ್ಕ ತಕ್ಕ ಗೌರವ” ಎಂದು ನೆಟ್ಟಿಗರು ಹಾಗೂ ಅಭಿಮಾನಿಗಳು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

 


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!