ರೀಲ್ಸ್ ಹುಚ್ಚು: 15 ದಿನದ ಪ್ರೀತಿಗಾಗಿ ಪತಿ, ಮಕ್ಕಳನ್ನು ಬಿಟ್ಟು ಯುವತಿಯನ್ನು ಮದುವೆಯಾದ ಮಹಿಳೆ!

ಬುಕ್ಸರ್ (ಬಿಹಾರ): ಸಾಮಾಜಿಕ ಜಾಲತಾಣಗಳ ಅತಿಯಾದ ವ್ಯಾಮೋಹವು ಕೌಟುಂಬಿಕ ಸಂಬಂಧಗಳನ್ನು ಹೇಗೆ ಬುಡಮೇಲು ಮಾಡುತ್ತಿದೆ ಎಂಬುದಕ್ಕೆ ಬಿಹಾರದ ಬುಕ್ಸರ್‌ನಲ್ಲಿ ನಡೆದ ಈ ಅಚ್ಚರಿಯ ಘಟನೆಯೇ ಸಾಕ್ಷಿ. ಕೇವಲ 15 ದಿನಗಳ ರೀಲ್ಸ್ ಸ್ನೇಹಕ್ಕಾಗಿ ಮಹಿಳೆಯೊಬ್ಬರು ತಮ್ಮ ಪತಿ ಹಾಗೂ ಇಬ್ಬರು ಮಕ್ಕಳನ್ನು ತೊರೆದು ಮತ್ತೊಬ್ಬ ಯುವತಿಯನ್ನು ಮದುವೆಯಾಗಿರುವುದು ಈಗ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದ ಇಬ್ಬರು ಮಹಿಳೆಯರು ರೀಲ್ಸ್ ಮಾಡುವ ವಿಚಾರದಲ್ಲಿ ಪರಿಚಯವಾಗಿದ್ದರು. ದಿನಕಳೆದಂತೆ ಇವರ ನಡುವಿನ ಮಾತುಕತೆ ಫೋನ್ ಸಂಭಾಷಣೆಗೆ ತಿರುಗಿ, ಕೇವಲ 15 ದಿನಗಳಲ್ಲೇ ಪ್ರೀತಿ ಅಂಕುರಿಸಿದೆ. ಈ ಪ್ರೇಮ ಎಷ್ಟೊಂದು ಗಾಢವಾಗಿತ್ತೆಂದರೆ, ಇಬ್ಬರೂ ಕೂಡಲೇ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ.
ಈ ಇಬ್ಬರು ಮಹಿಳೆಯರು ಮೊದಲು ವಿಂದ್ಯಾಚಲದ ಅಷ್ಟಭುಜ ದೇವಸ್ಥಾನದಲ್ಲಿ ಹಾರ ಬದಲಾಯಿಸಿಕೊಂಡು ಮದುವೆಯಾಗಿದ್ದಾರೆ. ಬಳಿಕ ಬುಕ್ಸರ್‌ನ ರಾಮೇಶ್ವರ ದೇವಸ್ಥಾನದಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ವಿವಾಹವಾಗಿದ್ದಾರೆ. “ರೀಲ್ಸ್ ಮೂಲಕ ಹುಟ್ಟಿದ ನಮ್ಮ ಪ್ರೀತಿಯನ್ನು ಅರ್ಥಮಾಡಿಕೊಂಡಿದ್ದೇವೆ. ಹಾಗಾಗಿ ಯಾವುದೇ ಯೋಚನೆ ಮಾಡದೆ ಒಂದಾಗಲು ನಿರ್ಧರಿಸಿದೆವು” ಎಂದು ಮದುವೆಯಾದ ಮಹಿಳೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.
ಮನೆಯಲ್ಲಿದ್ದ ಪುಟ್ಟ ಮಕ್ಕಳನ್ನು ಬಿಟ್ಟು ಈ ರೀತಿ ಮದುವೆಯಾಗಿರುವ ಮಹಿಳೆಯ ನಡೆಗೆ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ದಿನವೂ ರೀಲ್ಸ್ ಮಾಡುವ ನೆಪದಲ್ಲಿ ಮನೆಯಿಂದ ಹೊರಗೆ ಹೋಗುತ್ತಿದ್ದಳು, ಮಕ್ಕಳ ಕಡೆ ಗಮನ ಹರಿಸುತ್ತಿರಲಿಲ್ಲ” ಎಂದು ಪತಿ ಹಾಗೂ ಸಂಬಂಧಿಕರು ದೂರಿದ್ದಾರೆ. ಇನ್ನು ಸ್ಥಳೀಯರು ಇದೊಂದು ಒತ್ತಾಯದ ಮದುವೆಯಾಗಿರಬಹುದು ಅಥವಾ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳಲು ಮಾಡಿದ ತಂತ್ರವಿರಬಹುದು ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾಗುವ ಅಪರಿಚಿತರೊಂದಿಗೆ ಕೆಲವೇ ದಿನಗಳಲ್ಲಿ ಜೀವನದ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಮೂಡಿದೆ. ಇಬ್ಬರು ಮಕ್ಕಳ ಭವಿಷ್ಯವನ್ನು ಬಲಿಗೊಟ್ಟು 15 ದಿನಗಳ ಸ್ನೇಹಕ್ಕಾಗಿ ಕುಟುಂಬವನ್ನೇ ತ್ಯಜಿಸಿದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.



