ಚಾಮರಾಜನಗರ: ಮಹಿಳಾ ವೇಷ ಧರಿಸಿ ಒಳ ಉಡುಪು ಕದಿಯುತ್ತಿದ್ದ ‘ಸೈಕೋ’ ಕಳ್ಳನ ಬಂಧನ

ಚಾಮರಾಜನಗರ: ಜಿಲ್ಲಾ ಕೇಂದ್ರದ ವಿವಿಧ ಬಡಾವಣೆಗಳಲ್ಲಿ ಕಳೆದ ಕೆಲವು ದಿನಗಳಿಂದ ಮಹಿಳೆಯರಲ್ಲಿ ಆತಂಕ ಮತ್ತು ಅಚ್ಚರಿ ಮೂಡಿಸಿದ್ದ ವಿಚಿತ್ರ ಕಳ್ಳತನ ಪ್ರಕರಣಕ್ಕೆ ಕೊನೆಗೂ ತೆರೆ ಬಿದ್ದಿದೆ. ಬಟ್ಟೆ ಒಗೆದು ಒಣಗಲು ಹಾಕಿದ್ದ ಮಹಿಳೆಯರ ಒಳ ಉಡುಪುಗಳನ್ನು ಮಾತ್ರ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಅಮೃತ್ ಎಂಬ ವ್ಯಕ್ತಿಯನ್ನು ಚಾಮರಾಜನಗರ ಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ನಗರದ ಇಂದಿರಾ ನಗರ, ಹೌಸಿಂಗ್ ಬೋರ್ಡ್ ಕಾಲೋನಿ ಹಾಗೂ ಕರಿನಂಜನಪುರ ಬಡಾವಣೆಗಳಲ್ಲಿ ಕಳೆದ ಕೆಲವು ವಾರಗಳಿಂದ ನಿಗೂಢವಾಗಿ ಬಟ್ಟೆಗಳು ನಾಪತ್ತೆಯಾಗುತ್ತಿದ್ದವು. ಮನೆಯಂಗಳದಲ್ಲಿ ಅಥವಾ ಟೆರೇಸ್ ಮೇಲೆ ಒಣಗಲು ಹಾಕಿದ್ದ ಬಟ್ಟೆಗಳ ಪೈಕಿ ಕೇವಲ ಮಹಿಳೆಯರ ಒಳ ಉಡುಪುಗಳು ಮಾತ್ರ ಕಳುವಾಗುತ್ತಿದ್ದವು. ಇನ್ನು ಮಧ್ಯರಾತ್ರಿ ವೇಳೆ ಮಹಿಳೆಯರ ಉಡುಪು ಧರಿಸಿದ ವ್ಯಕ್ತಿಯೊಬ್ಬ ಓಡಾಡುತ್ತಿರುವುದನ್ನು ಕಂಡು, ಜನರು ದೆವ್ವದ ಕಾಟವಿರಬಹುದು ಎಂದು ತೀವ್ರ ಭಯಭೀತರಾಗಿದ್ದರು.
ಸರಣಿ ಕಳವು ಪ್ರಕರಣಗಳಿಂದ ಎಚ್ಚೆತ್ತ ಪೊಲೀಸರು ಬಡಾವಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸೈಕೋ ಕಳ್ಳನ ಕೃತ್ಯ ಬಯಲಾಗಿದೆ. ಆರೋಪಿ ಅಮೃತ್ ಮಧ್ಯರಾತ್ರಿ 1 ರಿಂದ 3 ಗಂಟೆಯ ಸಮಯದಲ್ಲಿ ತಾನೂ ಕೂಡ ಮಹಿಳೆಯಂತೆ ಸೀರೆ ಅಥವಾ ಬಟ್ಟೆಗಳನ್ನು ಧರಿಸಿ, ಮುಖಕ್ಕೆ ಮುಸುಕು ಹಾಕಿಕೊಂಡು ಓಡಾಡುತ್ತಿದ್ದ. ಯಾರೂ ಇಲ್ಲದ ಸಮಯ ಸಾಧಿಸಿ ಕಾಂಪೌಂಡ್ ಹಾರಿ ಒಳಗೆ ನುಗ್ಗಿ ತನ್ನ ವಿಕೃತ ಹವ್ಯಾಸವನ್ನು ಪೂರೈಸಿಕೊಳ್ಳುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಆರೋಪಿಯ ವಿಚಿತ್ರ ನಡವಳಿಕೆಯಿಂದಾಗಿ ಪೊಲೀಸರು ಆತನನ್ನು ‘ಸೈಕೋಪಾತ್’ ಎಂದು ಶಂಕಿಸಿದ್ದಾರೆ. ಕದ್ದ ಬಟ್ಟೆಗಳನ್ನು ಈತ ಏನು ಮಾಡುತ್ತಿದ್ದ? ಈ ಕೃತ್ಯದ ಹಿಂದೆ ಯಾವುದಾದರೂ ಮಾನಸಿಕ ವಿಕೃತಿ ಇದೆಯೇ? ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಸದ್ಯ ಆರೋಪಿಯನ್ನು ವೈದ್ಯಕೀಯ ಪರೀಕ್ಷೆ ಹಾಗೂ ಮಾನಸಿಕ ತಜ್ಞರ ತಪಾಸಣೆಗೆ ಒಳಪಡಿಸಲಾಗಿದೆ.
ಈ ‘ಸೈಕೋ’ ಕಳ್ಳನ ಬಂಧನದಿಂದಾಗಿ ಕಳೆದ ಹಲವು ದಿನಗಳಿಂದ ಕಣ್ಣೆತ್ತಿ ಮಲಗದಿದ್ದ ಬಡಾವಣೆಯ ನಿವಾಸಿಗಳು ಈಗ ನಿಟ್ಟುಸಿರು ಬಿಟ್ಟಿದ್ದಾರೆ. ಚಾಮರಾಜನಗರ ಪಟ್ಟಣ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



