ಬೆಳಗಾವಿಯ ಕೀರ್ತಿ ಪತಾಕೆ ಹಾರಿಸಿದ ಕೂಲಿ ಕಾರ್ಮಿಕನ ಪುತ್ರ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ರ್‍ಯಾಂಕ್

ಬೆಳಗಾವಿ: ಇಂದಿನ ಕಠಿಣ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬಡತನ ಸಾಧನೆಗೆ ಅಡ್ಡಿಯಲ್ಲ ಎಂಬುದನ್ನು ಬೆಳಗಾವಿ ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿ ಅಂಕಿತ್ ಭೀಮಪ್ಪ ಕಾರತಗಿ ಸಾಬೀತುಪಡಿಸಿದ್ದಾರೆ. ಇಂದು ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಅಂಕಿತ್ ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆಯುವ ಮೂಲಕ ಜಿಲ್ಲೆ ಹಾಗೂ ತಮ್ಮ ಕಾಲೇಜಿಗೆ ಅಭೂತಪೂರ್ವ ಕೀರ್ತಿ ತಂದಿದ್ದಾರೆ.
ಹುಕ್ಕೇರಿ ತಾಲ್ಲೂಕಿನ ನಿಡಸೋಸಿಯ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾದ ಅಂಕಿತ್, ಒಟ್ಟು 600 ಅಂಕಗಳಿಗೆ 598 ಅಂಕಗಳನ್ನು ಗಳಿಸಿದ್ದಾರೆ.
ಅಂಕಿತ್ ಅವರ ಈ ಸಾಧನೆಯ ಹಿಂದೆ ದೊಡ್ಡ ಶ್ರಮವಿದೆ. ಮೂಲತಃ ಗೋಕಾಕ್ ತಾಲ್ಲೂಕಿನ ರಾಜಾಪುರ ಗ್ರಾಮದವರಾದ ಅಂಕಿತ್ ಅವರ ತಂದೆ ಭೀಮಪ್ಪ ಅವರು ಚಿಕ್ಕೋಡಿಯ ಸಿಮೆಂಟ್ ಅಂಗಡಿಯೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ಸುನೀತಾ ಗೃಹಿಣಿ. ಆರ್ಥಿಕ ಸಂಕಷ್ಟಗಳ ನಡುವೆಯೂ ಮಗನ ವಿದ್ಯಾಭ್ಯಾಸಕ್ಕೆ ಪೋಷಕರು ನೀಡಿದ ಬೆಂಬಲಕ್ಕೆ ಅಂಕಿತ್ ಇಂದು ಸಾರ್ಥಕತೆ ತಂದಿದ್ದಾರೆ.
”600ಕ್ಕೆ 600 ಅಂಕ ಪಡೆಯುವ ನಿರೀಕ್ಷೆ ಇತ್ತು. ಇಂಗ್ಲಿಷ್‌ನಲ್ಲಿ ಎರಡು ಅಂಕ ಕಡಿಮೆ ಬಂದಿರುವುದು ಸ್ವಲ್ಪ ಬೇಸರ ತಂದಿದೆ. ದಿನಕ್ಕೆ 8 ಗಂಟೆಗಳ ಕಾಲ ನಿರಂತರ ಓದು, ಕಾಲೇಜಿನ ಉಪನ್ಯಾಸಕರ ಮಾರ್ಗದರ್ಶನ ಹಾಗೂ ಪಾಲಕರ ಹಾರೈಕೆಯೇ ನನ್ನ ಈ ಸಾಧನೆಗೆ ಕಾರಣ.”
— ಅಂಕಿತ್ ಕಾರತಗಿ, ರಾಜ್ಯಕ್ಕೆ 2ನೇ ರ್ಯಾಂಕ್ ವಿಜೇತ
ವಸತಿ ಕಾಲೇಜಿನಲ್ಲಿದ್ದುಕೊಂಡು ಶಿಸ್ತಿನ ಅಭ್ಯಾಸ ನಡೆಸುತ್ತಿದ್ದ ಅಂಕಿತ್ ಅವರಿಗೆ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ವಿಶೇಷ ಆಸಕ್ತಿ. ತಮ್ಮ ಮುಂದಿನ ಭವಿಷ್ಯದ ಕುರಿತು ಮಾತನಾಡಿದ ಅವರು, ತಮಗೆ ಸಾಫ್ಟ್‌ವೇರ್ ಎಂಜಿನಿಯರ್ ಆಗುವ ಕನಸಿದೆ ಎಂದು ತಿಳಿಸಿದ್ದಾರೆ.
ಅಂಕಿತ್ ಅವರ ಈ ಐತಿಹಾಸಿಕ ಸಾಧನೆಗೆ ಕಾಲೇಜಿನ ಮಂಡಳಿ, ಗ್ರಾಮಸ್ಥರು ಹಾಗೂ ಜಿಲ್ಲೆಯ ಗಣ್ಯರು ಅಭಿನಂದನೆಗಳ ಸುರಿಮಳೆಗೈದಿದ್ದಾರೆ. ಕೂಲಿ ಕಾರ್ಮಿಕನ ಮಗ ಇಂದು ಇಡೀ ರಾಜ್ಯವೇ ತನ್ನತ್ತ ತಿರುಗಿ ನೋಡುವಂತೆ ಮಾಡುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.



