ಜಿಲ್ಲಾ ಸುದ್ದಿತಾಲೂಕುರಾಜ್ಯ ಸುದ್ದಿ

ಬೆಳಗಾವಿ: ಆಟೋ ಗ್ಯಾಸ್‌ಗಾಗಿ ಚಾಲಕರ ಪರದಾಟ; ಅಂತರಾಷ್ಟ್ರೀಯ ಸಂಘರ್ಷದ ಬಿಸಿ ಕುಂದಾನಗರಿಗೆ!

Share News

ಬೆಳಗಾವಿ: ಜಾಗತಿಕ ಮಟ್ಟದಲ್ಲಿ ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವೆ ನಡೆಯುತ್ತಿರುವ ಯುದ್ಧದ ಕರಿನೆರಳು ಈಗ ಕುಂದಾನಗರಿಯ ಶ್ರಮಿಕ ವರ್ಗದ ಬದುಕಿನ ಮೇಲೆ ಬಿದ್ದಿದೆ. ನಗರದಲ್ಲಿ ಸಿಎನ್‌ಜಿ (CNG) ಗ್ಯಾಸ್ ಕೊರತೆಯಿಂದಾಗಿ ಆಟೋ ಚಾಲಕರ ದೈನಂದಿನ ಜೀವನ ಅಸ್ತವ್ಯಸ್ತಗೊಂಡಿದೆ.

ನಗರದ ಗ್ಯಾಸ್ ಫಿಲ್ಲಿಂಗ್ ಸ್ಟೇಷನ್‌ಗಳಲ್ಲಿ ಬುಧವಾರ ನೂರಾರು ಆಟೋಗಳು ಕಿಲೋಮೀಟರ್‌ಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡುಬಂದಿತು. ಇಡೀ ದಿನ ಗ್ಯಾಸ್‌ಗಾಗಿ ಕಾಯುವುದರಲ್ಲೇ ಕಳೆಯುತ್ತಿರುವುದರಿಂದ, ಚಾಲಕರಿಗೆ ಬಾಡಿಗೆ ಓಡಿಸಲು ಸಮಯವೇ ಸಿಗದಂತಾಗಿದೆ. ದಿನವಿಡೀ ದುಡಿದರೆ ಮಾತ್ರ ಸಂಜೆ ಒಲೆ ಹಚ್ಚುವಂತಹ ಪರಿಸ್ಥಿತಿ ಇರುವ ಬಡ ಕುಟುಂಬಗಳು ಈಗ ಆತಂಕಕ್ಕೆ ಸಿಲುಕಿವೆ.

ಕೇವಲ ಆಟೋಗಳಷ್ಟೇ ಅಲ್ಲದೆ, ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ನಗರದ ಕೆಲವು ಸಣ್ಣಪುಟ್ಟ ಹೋಟೆಲ್‌ಗಳು ಹಾಗೂ ಉಪಹಾರ ಮಂದಿರಗಳು ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಿವೆ. ಮಧ್ಯಮ ವರ್ಗದ ಜನರ ಬದುಕು ಈ ಅನಿಲ ಕೊರತೆಯಿಂದಾಗಿ ಏರುಪೇರಾಗಿದೆ.

ನಾವು ದಿನವಿಡೀ ರಸ್ತೆಯಲ್ಲೇ ಕಾಯುತ್ತಾ ಕುಳಿತರೆ ಜೀವನ ನಡೆಸುವುದು ಹೇಗೆ? ಯುದ್ಧದ ಪರಿಣಾಮವಾಗಿ ನಮ್ಮಂತಹ ಬಡವರು ಬೀದಿಗೆ ಬೀಳುವಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣ ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಹತೋಟಿಗೆ ತರಬೇಕು,” ಎಂದು ಆಟೋ ಚಾಲಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

​ಇಂಧನ ಪೂರೈಕೆಯಲ್ಲಿ ಉಂಟಾಗಿರುವ ಈ ವ್ಯತ್ಯಯವು ಶೀಘ್ರದಲ್ಲಿ ಸರಿಯಾಗದಿದ್ದರೆ, ನಗರದ ಸಾರಿಗೆ ವ್ಯವಸ್ಥೆ ಹಾಗೂ ಶ್ರಮಿಕ ವರ್ಗದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಆತಂಕ ಎದುರಾಗಿದೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!